ನವದೆಹಲಿ: ಸ್ಪೇಸ್ ಎಕ್ಸ್ ಸಿಇಒ ಎಲೋನ್ ಮಸ್ಕ್ ಅವರು ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಅವರು ಭಾರತೀಯ ಬಾಹ್ಯಾಕಾಶ ಕಂಪನಿಗಳ ಪ್ರತಿನಿಧಿಗಳನ್ನು ಭೇಟಿ ಮಾಡುವ ಸಾಧ್ಯತೆಯಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ತಾವು ಭಾರತಕ್ಕೆ ಬರುತ್ತಿರುವುದಾಗಿ ಈ ತಿಂಗಳ ಆರಂಭದಲ್ಲಿ ಮಸ್ಕ್ ಹೇಳಿದ್ದರು.
ತಮ್ಮ ಭೇಟಿಯ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಅವರು "ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಕಾಯುತ್ತಿದ್ದೇನೆ!" ಎಂದು ಬರೆದಿದ್ದರು. ಟೆಸ್ಲಾ ಸಿಇಒ ಮಸ್ಕ್ ಏಪ್ರಿಲ್ 22ರ ವಾರದಲ್ಲಿ ನವದೆಹಲಿಯಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಲಿದ್ದಾರೆ ಎಂದು ವರದಿಯಾಗಿದೆ.
ಮಾಧ್ಯಮ ವರದಿಗಳ ಪ್ರಕಾರ ಭಾರತದ ಧ್ರುವ ಸ್ಪೇಸ್, ಸ್ಕೈರೂಟ್ ಏರೋಸ್ಪೇಸ್, ಅಗ್ನಿಕುಲ್ ಕಾಸ್ಮೋಸ್ ಮತ್ತು ಬೆಲಾಟ್ರಿಕ್ಸ್ ಏರೋಸ್ಪೇಸ್ ಸೇರಿದಂತೆ ಪ್ರಮುಖ ಬಾಹ್ಯಾಕಾಶ ಸ್ಟಾರ್ಟ್ಅಪ್ಗಳ ಪ್ರತಿನಿಧಿಗಳು ಮಸ್ಕ್ ಅವರೊಂದಿಗೆ ಸಭೆ ನಡೆಸಲಿದ್ದಾರೆ. ಮಸ್ಕ್ರೊಂದಿಗೆ ಸಭೆ ನಡೆಸಲು ಈ ಕಂಪನಿಗಳಿಗೆ ಸರ್ಕಾರ ಈಗಾಗಲೇ ಆಹ್ವಾನ ಕಳುಹಿಸಿದೆ.
ಎಲೋನ್ ಮಸ್ಕ್ ಅವರ ಈ ಭಾರತ ಭೇಟಿಯ ನಂತರ ಸ್ಪೇಸ್ ಎಕ್ಸ್ನ ಸ್ಟಾರ್ ಲಿಂಕ್ ಮತ್ತು ಟೆಸ್ಲಾ ಭಾರತಕ್ಕೆ ಪ್ರವೇಶಿಸಲು ದಾರಿ ಮಾಡಿಕೊಡಬಹುದು. ಮಸ್ಕ್ ಅವರ ಭೇಟಿಗೆ ಮುಂಚಿತವಾಗಿ ಉಪಗ್ರಹ ಆಧಾರಿತ ಇಂಟರ್ ನೆಟ್ ಸೇವೆ ಸ್ಟಾರ್ ಲಿಂಕ್ ಸಂವಹನ ಸಚಿವಾಲಯದಿಂದ ತಾತ್ಕಾಲಿಕ ಅನುಮೋದನೆಯನ್ನು ಪಡೆದಿದೆ ಮತ್ತು ಕೆಲ ಭದ್ರತಾ ವಿಷಯಗಳ ಬಗ್ಗೆ ಗೃಹ ಸಚಿವಾಲಯದ ಅಂತಿಮ ಅನುಮತಿಗಾಗಿ ಕಾಯುತ್ತಿದೆ.