ನವದೆಹಲಿ: ಮಹತ್ವಾಕಾಂಕ್ಷೆಯ ಗಗನಯಾನ ಮಾನವ ಬಾಹ್ಯಾಕಾಶಯಾನ ಕಾರ್ಯಕ್ರಮದ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇಟ್ಟಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬುಧವಾರ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ (ಎಸ್ಡಿಎಸ್ಸಿ-ಶಾರ್) ಎಚ್ಎಲ್ವಿಎಂ 3 ನೌಕೆಯ ಜೋಡಣೆ ಕೆಲಸ ಪ್ರಾರಂಭಿಸಿದೆ.
ಈ ಮಿಷನ್ 2025ರಲ್ಲಿ ಉಡಾವಣೆಯಾಗಲಿದ್ದು, ಇದು ಮಹತ್ವಾಕಾಂಕ್ಷೆಯ ಗಗನಯಾನ ಮಾನವ ಬಾಹ್ಯಾಕಾಶ ಕಾರ್ಯಕ್ರಮದ ಅಡಿಯಲ್ಲಿ ಮೊದಲ ಸಿಬ್ಬಂದಿರಹಿತ ಹಾರಾಟವಾಗಲಿದೆ. ಬಾಹ್ಯಾಕಾಶ ಮಿಷನ್ನಿಂದ ಪಡೆಯುವ ಮಾಹಿತಿಗಳು ಮಾನವಸಹಿತ ಮಿಷನ್ಗಳ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಲಿವೆ.
ಡಿಸೆಂಬರ್ 18, 2014ರಂದು ಎಲ್ವಿಎಂ 3-ಎಕ್ಸ್ /ಕೇರ್ ಮಿಷನ್ ಉಡಾವಣೆಯಾಗಿತ್ತು. ಈಗ ಅದರ 10ನೇ ವಾರ್ಷಿಕೋತ್ಸವವಾದ ಇಂದು ಎಚ್ಎಲ್ವಿಎಂ 3 ಜೋಡಣೆಯನ್ನು ಪ್ರಾರಂಭಿಸಿರುವುದು ವಿಶೇಷ.
"ಎಲ್ವಿಎಂ 3-ಎಕ್ಸ್ /ಕೇರ್‌ನ 10ನೇ ವಾರ್ಷಿಕೋತ್ಸವದಂದು ಗಗನಯಾನದ ಮೊದಲ ಸಿಬ್ಬಂದಿರಹಿತ ಹಾರಾಟಕ್ಕಾಗಿ ಇಸ್ರೋ ಎಚ್ಎಲ್ವಿಎಂ 3 ಅನ್ನು ಜೋಡಿಸಲು ಪ್ರಾರಂಭಿಸಲಾಗಿದೆ! ಭಾರತದ ಮೊದಲ ಮಾನವ ಬಾಹ್ಯಾಕಾಶಯಾನ ಮತ್ತು ಭವಿಷ್ಯದ ಬಾಹ್ಯಾಕಾಶ ಮಹತ್ವಾಕಾಂಕ್ಷೆಗಳತ್ತ ಇದು ಪ್ರಮುಖ ಹೆಜ್ಜೆಯಾಗಿದೆ" ಎಂದು ಇಸ್ರೋ ಹೇಳಿದೆ.
"ಡಿಸೆಂಬರ್ 18ರಂದು ಎಸ್ಡಿಎಸ್ಸಿಯಲ್ಲಿ 8.45 ಗಂಟೆಗೆ, ಎಸ್ 200 ಮೋಟರ್ನ ಪೂರ್ಣ ಫ್ಲೆಕ್ಸ್ ಸೀಲ್ ನಾಜಲ್‌ನೊಂದಿಗೆ ನಾಜಲ್ ಎಂಡ್ ಸೆಗ್ಮೆಂಟ್‌ನ ಸ್ಟ್ಯಾಕಿಂಗ್ ನಡೆಯಿತು. ಇದರೊಂದಿಗೆ ಎಚ್ಎಲ್ವಿಎಂ 3-ಜಿ 1/ಒಎಂ-1 ಮಿಷನ್ನ ಅಧಿಕೃತ ಉಡಾವಣಾ ಅಭಿಯಾನ ಪ್ರಾರಂಭವಾದಂತಾಗಿದೆ" ಎಂದು ಅದು ಹೇಳಿದೆ.
2014ರ ಕಾರ್ಯಾಚರಣೆಯ ಸಮಯದಲ್ಲಿ ಎಲ್ವಿಎಂ 3-ಎಕ್ಸ್ (ಈಗ ಇದನ್ನು ಎಚ್ಎಲ್ವಿಎಂ 3 ಎಂದು ಹೆಸರಿಸಲಾಗಿದೆ) ತನ್ನ ಮೊದಲ ಹಾರಾಟವನ್ನು ಪ್ರಾರಂಭಿಸಿತ್ತು ಮತ್ತು 3,775 ಕೆ.ಜಿ ತೂಕದ (ಎಲ್ವಿಎಂ 3-ಎಕ್ಸ್ /ಕೇರ್ ಮಿಷನ್) ಕ್ರೂ ಮಾಡ್ಯೂಲ್ ಅನ್ನು 126 ಕಿ.ಮೀ ಸಬ್ ಆರ್ಬಿಟಲ್ ಎತ್ತರಕ್ಕೆ ಏರಿಸಿತ್ತು. ಥ್ರಸ್ಟರ್ ಗಳನ್ನು ಬಳಸಿ ಇದು ಸುಲಭವಾಗಿ ಭೂಮಿಯ ವಾತಾವರಣಕ್ಕೆ ಮರುಪ್ರವೇಶಿಸಿತ್ತು. ನಂತರ ಬಂಗಾಳ ಕೊಲ್ಲಿಯಲ್ಲಿ ಸುಗಮವಾಗಿ ಇಳಿದಿತ್ತು. ಇದನ್ನು ಭಾರತೀಯ ಕೋಸ್ಟ್ ಗಾರ್ಡ್ ಸಮುದ್ರದಿಂದ ಎತ್ತಿ ಹೊರತಂದಿದ್ದರು.
2019ರಲ್ಲಿ ಅಧಿಕೃತ ಗಗನಯಾನ ಯೋಜನೆಗೆ ಅನುಮೋದನೆ ನೀಡುವ ಮೊದಲೇ, ಮಾನವ ಬಾಹ್ಯಾಕಾಶ ಯೋಜನೆಯ ಪೂರ್ವ-ಯೋಜನಾ ಚಟುವಟಿಕೆಗಳ ಭಾಗವಾಗಿ ಕ್ರೂ ಮಾಡ್ಯೂಲ್ ಅನ್ನು ಅಭಿವೃದ್ಧಿಪಡಿಸಲಾಗಿದೆ.