ಮೈಸೂರು: ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೆ ಭೂ ಸ್ವಾಧೀನ ಪ್ರಕ್ರಿಯೆ ಹಾಗೂ ಮೈಸೂರು - ಬೆಂಗಳೂರು ಹೈವೇಯಲ್ಲಿ ಟೋಲ್ ಸಮಸ್ಯೆಗೆ ಪರಿಹಾರ, ಅರ್ಜುನ ಆನೆ ಸ್ಮಾರಕ ಹಾಗೂ ಮುಡಾ ಹಗರಣ ಕುರಿತು ಸಂಸದ ಯದುವೀರ್ ಒಡೆಯರ್ ಈಟಿವಿ ಭಾರತದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಮುಡಾದಲ್ಲಿ 300 ಕೋಟಿ ಅಕ್ರಮ ಪತ್ತೆ : ಮುಡಾದಲ್ಲಿ ಬಹಳ ದೊಡ್ಡ ಹಗರಣ ಆಗಿದೆ. ಇಡಿ 300 ಕೋಟಿ ಅಕ್ರಮ ಪತ್ತೆ ಮಾಡಿದೆ. ಜವಾಬ್ದಾರಿಯುತ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವುದು ಸೂಕ್ತ. ತನಿಖೆ ವರದಿ ಬಂದ ನಂತರ ಅದರ ಆಧಾರದ ಮೇಲೆ ಮುಂದುವರೆಯಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದಿದ್ದಾರೆ.
ವಿಮಾನ ನಿಲ್ದಾಣದ ಫೇಸ್ ಒನ್ : ಮೈಸೂರು ಜಿಲ್ಲಾ ಅಭಿವೃದ್ದಿ ಸಭೆಯಲ್ಲಿ ಮೈಸೂರು ವಿಮಾನ ನಿಲ್ದಾಣ ಅಭಿವೃದ್ದಿಯ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗಿದೆ. ಅವರು ಕೇಂದ್ರ ಸರ್ಕಾರದ ಅನುದಾನಕ್ಕೆ ಪತ್ರ ಬರೆದಿದ್ದಾರೆ. ಭೂ ಸ್ವಾಧೀನ ಮಾಡಿಕೊಳ್ಳುವ ಕಾರ್ಯವೂ ಒಂದು ವಾರದಲ್ಲಿ ಮುಗಿಯುತ್ತದೆೆ. ನಂತರ ವಿಮಾನ ನಿಲ್ದಾಣದ ಫೇಸ್ ಒನ್ ಅಭಿವೃದ್ದಿಯಾಗುತ್ತದೆ ಎಂದು ಸಂಸದರು ವಿಶ್ವಾಸ ವ್ಯಕ್ತಪಡಿಸಿದರು.
ಹೈವೇ ನವೀಕರಣಕ್ಕೆ ಪ್ಯಾಕೇಜ್ : ಹೈವೇ ನವೀಕರಣಕ್ಕೆ 711 ಕೋಟಿ ಟೆಂಡರ್ ಪ್ರಕ್ರಿಯೆ ಸಿದ್ಧವಾಗಿದೆ. 3 ತಿಂಗಳ ಒಳಗೆ ಕೆಲಸ ಆರಂಭವಾಗಲಿದೆ. ಟೋಲ್ ವಿಚಾರಕ್ಕೂ ಪರಿಹಾರ ಬರುತ್ತದೆ. ಬೆಂಗಳೂರು - ಮೈಸೂರು ಟೋಲ್ಗೆ ಸಂಬಂಧಿಸಿ ಕಚೇರಿಗೆ ಅಧಿಕ ಬೇಡಿಕೆ ಬಂದಿವೆ. ಪೂರ್ಣ ಪ್ರಮಾಣದ ಟೋಲ್ ವಿರುದ್ದ ಸಾರ್ವಜನಿಕರು ಕಂಪ್ಲೇಟ್ ನೀಡಿದ್ದಾರೆ ಎಂದು ಹೇಳಿದರು.
ಅರ್ಜುನ ಆನೆ ಸ್ಮಾರಕ : ಮೈಸೂರು ಪರಂಪರೆಯ ದಸರಾಗೆ ಕೇಂದ್ರ ಬಿಂದು ನಮ್ಮ ದಸರಾ ಗಜಪಡೆ. ಅಂಬಾರಿ ಹೊತ್ತ ಅರ್ಜುನ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿತು. ಅದರ ಸ್ಮರಣಾರ್ಥ ಮೈಸೂರಿನಲ್ಲಿ ಅರ್ಜುನ ಸರ್ಕಲ್ ನಿರ್ಮಿಸುವ ಬಗ್ಗೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ಇಂತಹ ಒಳ್ಳೆ ಕೆಲಸದ ಪ್ರಕ್ರಿಯೆ ರಾಜ್ಯ ಸರ್ಕಾರ ಹಾಗೂ ಮೈಸೂರು ಮಹಾನಗರ ಪಾಲಿಕೆಯಿಂದ ಶುರುವಾಗಬೇಕಿದೆ ಎಂದು ನಾವು ಆಗ್ರಹಿಸುತ್ತೇವೆ ಎಂದರು.
ಸರ್ಕಾರ ಹಾಗೂ ಅರಮನೆ ತಿಕ್ಕಾಟ : ಸರ್ಕಾರ ಹಾಗೂ ಅರಮನೆ ನಡುವೆ ನಡೆಯುತ್ತಿರುವ ಕಾನೂನಾತ್ಮಾಕ ಹೋರಾಟಗಳನ್ನು ನಮ್ಮ ತಾಯಿ ಪ್ರಮೋದ ದೇವಿ ಒಡೆಯರ್ ಅವರು ನೋಡಿಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಸಾಕಷ್ಟು ಬಾರಿ ಮಾತನಾಡಿರುವುದರಿಂದ ಹೆಚ್ಚು ಮಾತನಾಡಲಾರೆ. ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತಿರುತ್ತದೆ ಎಂದು ಹೇಳಿದರು.
ಇದನ್ನೂ ಓದಿ : ಮೈಸೂರು ಪ್ರವಾಸೋದ್ಯಮ ಅಭಿವೃದ್ದಿಗೆ ವಿಮಾನಯಾನ ಸಂಸ್ಥೆಗಳ ಜತೆ ಮಾತುಕತೆ: ಸಂಸದ ಯದುವೀರ್ ಒಡೆಯರ್ - MP YADUVEER WADIYAR