ಸ್ಯಾನ್ ಫ್ರಾನ್ಸಿಸ್ಕೋ : ಎಲೆಕ್ಟ್ರಿಕ್ ಕಾರುಗಳ ಬ್ಯಾಟರಿಗಳನ್ನು ಹೆಚ್ಚು ಸುಸ್ಥಿರಗೊಳಿಸುವ ಮತ್ತು ಅವುಗಳನ್ನು ಕೋಬಾಲ್ಟ್ ಮುಕ್ತವಾಗಿಸುವ ನಿಟ್ಟಿನಲ್ಲಿ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಸಂಶೋಧಕರು ಹೊಸ ಬ್ಯಾಟರಿ ವಸ್ತುವೊಂದನ್ನು ವಿನ್ಯಾಸಗೊಳಿಸಿದ್ದಾರೆ. ಈ ಸಂಶೋಧಕರ ತಂಡದಲ್ಲಿ ಭಾರತೀಯ ಮೂಲದ ಓರ್ವ ವಿಜ್ಞಾನಿ ಇರುವುದು ವಿಶೇಷ. ವಾಹನ ತಯಾರಕ ಲ್ಯಾಂಬೊರ್ಗಿನಿ ತಂತ್ರಜ್ಞಾನದ ಪೇಟೆಂಟ್ ಗೆ ಪರವಾನಗಿ ನೀಡಿದೆ.
ಈ ಸಂಶೋಧನೆಯಲ್ಲಿ ರಸಾಯನಶಾಸ್ತ್ರಜ್ಞರು ಸಾವಯವ ವಸ್ತುಗಳ ಆಧಾರದ ಮೇಲೆ ಬ್ಯಾಟರಿ ಕ್ಯಾಥೋಡ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಇವಿ ಉದ್ಯಮದ ವಿರಳ ಲೋಹಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಈ ವಸ್ತುವು ಟಿಎಕ್ಯೂನ ಅನೇಕ ಪದರಗಳನ್ನು ಒಳಗೊಂಡಿದೆ. ಇದು ಸಣ್ಣ ಸಾವಯವ ಅಣುವಾಗಿದ್ದು, ಮೂರು ಸಂಯೋಜಿತ ಷಟ್ಕೋನ ರಿಂಗ್ಗಳನ್ನು ಒಳಗೊಂಡಿದೆ. ಈ ಪದರಗಳು ಪ್ರತಿಯೊಂದು ದಿಕ್ಕಿನಲ್ಲಿಯೂ ಹೊರಕ್ಕೆ ವಿಸ್ತರಿಸಬಹುದು. ಇದು ಗ್ರಾಫೈಟ್ನ ರಚನೆಯನ್ನು ಹೋಲುತ್ತದೆ.
ಅಣುಗಳ ಒಳಗೆ ಕ್ವಿನೋನ್ ಗಳು ಎಂದು ಕರೆಯಲ್ಪಡುವ ರಾಸಾಯನಿಕ ಗುಂಪುಗಳಿವೆ. ಅವು ಎಲೆಕ್ಟ್ರಾನ್ಗಳ ಆಗರವಾಗಿವೆ ಮತ್ತು ಅಮೈನ್ ಗಳು ವಸ್ತುವಿಗೆ ಬಲವಾದ ಹೈಡ್ರೋಜನ್ ಬಂಧಗಳನ್ನು ರೂಪಿಸಲು ಸಹಾಯ ಮಾಡುತ್ತವೆ ಎಂದು ಎಸಿಎಸ್ ಸೆಂಟ್ರಲ್ ಸೈನ್ಸ್ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನವು ವಿವರಿಸಿದೆ. ಕೋಬಾಲ್ಟ್ ಹೊಂದಿರುವ ಬ್ಯಾಟರಿಗಳಿಗಿಂತ ಕಡಿಮೆ ವೆಚ್ಚದಲ್ಲಿ ಉತ್ಪಾದಿಸಬಹುದಾದ ಈ ವಸ್ತುವು ಕೋಬಾಲ್ಟ್ ಬ್ಯಾಟರಿಗಳಂತೆಯೇ ವಿದ್ಯುತ್ ಅನ್ನು ಪೂರೈಸಬಹುದು ಎಂದು ಸಂಶೋಧಕರು ತೋರಿಸಿದ್ದಾರೆ.