ನವದೆಹಲಿ: ಭಾರತದಲ್ಲಿ ಫೇಸ್ಬುಕ್ನ 13 ನಿಯಮಗಳ ಅಡಿಯಲ್ಲಿ 17.8 ದಶಲಕ್ಷ (1 ಕೋಟಿ 78 ಲಕ್ಷ) ಆಕ್ಷೇಪಾರ್ಹ ಕಂಟೆಂಟ್ ಹಾಗೂ ಇನ್ ಸ್ಟಾಗ್ರಾಮ್ನ 12 ನಿಯಮಗಳ ಅಡಿಯಲ್ಲಿ 4.8 ದಶಲಕ್ಷ (48 ಲಕ್ಷ) ಆಕ್ಷೇಪಾರ್ಹ ಕಂಟೆಂಟ್ಗಳನ್ನು ಜನವರಿಯಲ್ಲಿ ಡಿಲೀಟ್ ಮಾಡಲಾಗಿದೆ ಎಂದು ಮೆಟಾ ತಿಳಿಸಿದೆ. ಜನವರಿಯಲ್ಲಿ ಫೇಸ್ಬುಕ್ ಭಾರತೀಯ ಕುಂದುಕೊರತೆ ನಿವಾರಣಾ ವ್ಯವಸ್ಥೆಯ ಮೂಲಕ 29,548 ದೂರು ವರದಿಗಳನ್ನು ಸ್ವೀಕರಿಸಿದೆ ಮತ್ತು 21,060 ಪ್ರಕರಣಗಳಲ್ಲಿ ಬಳಕೆದಾರರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ವಿಧಾನಗಳನ್ನು ಒದಗಿಸಿದೆ ಎಂದು ಹೇಳಿದೆ.
ನಿರ್ದಿಷ್ಟ ನಿಯಮಗಳನ್ನು ಉಲ್ಲಂಘಿಸಿದ ಕಂಟೆಂಟ್ಗಳನ್ನು ವರದಿ ಮಾಡಲು ಪೂರ್ವ-ಸ್ಥಾಪಿತ ಚಾನೆಲ್ಗಳು, ಬಳಕೆದಾರರು ತಮ್ಮ ಡೇಟಾವನ್ನು ಡೌನ್ಲೋಡ್ ಮಾಡಬಹುದಾದ ಸ್ವಯಂ-ಪರಿಹಾರ ವಿಧಾನಗಳು, ಖಾತೆ ಹ್ಯಾಕ್ ಮಾಡಿದ ಸಮಸ್ಯೆಗಳನ್ನು ಪರಿಹರಿಸುವ ಮಾರ್ಗಗಳು ಇತ್ಯಾದಿ ವ್ಯವಸ್ಥೆಗಳ ಮೂಲಕ ಈ ದೂರು ವರದಿಗಳು ಬಂದಿದ್ದವು ಎಂದು ಐಟಿ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೈತಿಕ ಸಂಹಿತೆ) ನಿಯಮಗಳು, 2021 ಕ್ಕೆ ಅನುಸಾರವಾಗಿ ಮೆಟಾ ತನ್ನ ಮಾಸಿಕ ವರದಿಯಲ್ಲಿ ತಿಳಿಸಿದೆ.
"ವಿಶೇಷ ಪರಿಶೀಲನೆಯ ಅಗತ್ಯವಿರುವ ಇತರ 8,488 ವರದಿಗಳಲ್ಲಿ, ನಾವು ನಮ್ಮ ನೀತಿಗಳ ಪ್ರಕಾರ ಕಂಟೆಂಟ್ ಅನ್ನು ವಿಶ್ಲೇಷಿಸಿದ್ದೇವೆ ಮತ್ತು ಒಟ್ಟು 4,632 ದೂರುಗಳ ಮೇಲೆ ಕ್ರಮ ಕೈಗೊಂಡಿದ್ದೇವೆ. ಉಳಿದ 3,856 ಕುಂದುಕೊರತೆಗಳನ್ನು ಪರಿಶೀಲಿಸಲಾಗಿದ್ದರೂ ಅವುಗಳ ಮೇಲೆ ಕ್ರಮ ಕೈಗೊಂಡಿಲ್ಲ" ಎಂದು ಮೆಟಾ ತಿಳಿಸಿದೆ.