ನವದೆಹಲಿ: ಕಂಪ್ಯೂಟರ್ ಚಿಪ್ ತಯಾರಕ ಕಂಪನಿ ಮೀಡಿಯಾಟೆಕ್ ಗುರುವಾರ ಹೈಟೆಕ್ ಮೊಬೈಲ್ ಗೇಮಿಂಗ್ಗಾಗಿ ಡೈಮೆನ್ಸಿಟಿ 7300 ಮತ್ತು ಡೈಮೆನ್ಸಿಟಿ 7300 ಎಕ್ಸ್ ಎಂಬ 4 ಎನ್ಎಂ ಚಿಪ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಡೈಮೆನ್ಸಿಟಿ 7300 ಚಿಪ್ಸೆಟ್ಗಳು ಮಲ್ಟಿಟಾಸ್ಕಿಂಗ್, ಉತ್ತಮ ಛಾಯಾಗ್ರಹಣ, ವೇಗವರ್ಧಿತ ಗೇಮಿಂಗ್ ಮತ್ತು ಎಐ-ವರ್ಧಿತ ಕಂಪ್ಯೂಟಿಂಗ್ಗಾಗಿ ತಯಾರಿಸಲಾಗಿದ್ದರೆ, ಡೈಮೆನ್ಸಿಟಿ 7300 ಎಕ್ಸ್ ಅನ್ನು ಫ್ಲಿಪ್-ಶೈಲಿಯ ಮಡಚಬಹುದಾದ ಸಾಧನಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಇದು ಡ್ಯುಯಲ್ ಡಿಸ್ ಪ್ಲೇಗಳಿಗೆ ಬೆಂಬಲ ನೀಡುತ್ತದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.
"ಇತ್ತೀಚಿನ ಎಐ ಆವಿಷ್ಕಾರಗಳು ಮತ್ತು ಸಂಪರ್ಕ ವೈಶಿಷ್ಟ್ಯಗಳನ್ನು ಸಂಯೋಜಿಸಲು ಮೀಡಿಯಾಟೆಕ್ ಡೈಮೆನ್ಸಿಟಿ 7300 ಚಿಪ್ಗಳು ಪ್ರಮುಖ ಪಾತ್ರ ವಹಿಸಲಿವೆ. ಇದರಿಂದಾಗಿ ಗ್ರಾಹಕರು ತಡೆರಹಿತವಾಗಿ ಸ್ಟ್ರೀಮ್ ಮಾಡಬಹುದು ಮತ್ತು ಗೇಮಿಂಗ್ ಮಾಡಬಹುದು" ಎಂದು ಮೀಡಿಯಾಟೆಕ್ನ ವೈರ್ಲೆಸ್ ಸಂವಹನ ವ್ಯವಹಾರದ ಉಪ ಪ್ರಧಾನ ವ್ಯವಸ್ಥಾಪಕ ಡಾ.ಯೆಂಚೀ ಲೀ ಹೇಳಿದರು.
ಎರಡೂ ಚಿಪ್ ಸೆಟ್ ಗಳು ಆಕ್ಟಾ-ಕೋರ್ ಸಿಪಿಯು ಅನ್ನು ಹೊಂದಿದ್ದು, 4 ಪಟ್ಟು ಆರ್ಮ್ ಕಾರ್ಟೆಕ್ಸ್-ಎ 78 ಕೋರ್ಗಳನ್ನು ಒಳಗೊಂಡಿವೆ. ಇವು 2.5 ಗಿಗಾಹರ್ಟ್ಸ್‌ವರೆಗೆ ಕಾರ್ಯನಿರ್ವಹಿಸುತ್ತವೆ ಮತ್ತು 4 ಎಕ್ಸ್ ಆರ್ಮ್ ಕಾರ್ಟೆಕ್ಸ್-ಎ 55 ಕೋರ್ಗಳೊಂದಿಗೆ ಜೋಡಿಸಲ್ಪಟ್ಟಿವೆ.