ಶ್ರೀಹರಿಕೋಟಾ (ಆಂಧ್ರಪ್ರದೇಶ): ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸಣ್ಣ ಉಪಗ್ರಹ ಉಡಾವಣಾ ವಾಹನ- ಡಿ3 (SSLV- D3) ರ ಮೂರನೇ ಮತ್ತು ಅಂತಿಮ ಅಭಿವೃದ್ಧಿಶೀಲ ರಾಕೆಟ್ ಮೂಲಕ ಭೂ ವೀಕ್ಷಣಾ ಉಪಗ್ರಹ (Earth Observation Satellite) ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಿಂದ ಮೊದಲ ಎಸ್ಎಸ್ಎಲ್ವಿ ಪ್ರಾಯೋಗಿಕ ಪ್ರಕ್ರಿಯೆಯಾಗಿ 2022ರ ಆಗಸ್ಟ್ನಲ್ಲಿ ಎಸ್ಎಸ್ಎಲ್ವಿ ಡಿ1 ಅನ್ನು ಉಡಾವಣೆ ಮಾಡಲಾಗಿತ್ತು. ಆದರೆ ದುರದೃಷ್ಟವಶಾತ್ ಅದು ಗುರಿಯನ್ನು ಸಾಧಿಸಿರಲಿಲ್ಲ. ಎರಡನೇ ಪ್ರಾಯೋಗಿಕ ಹಾರಾಟವನ್ನು 2023ರ ಫೆಬ್ರವರಿಯ 10ರಂದು ಮಾಡಲಾಗಿತ್ತು. ಇದು ಭೂ ವೀಕ್ಷಣಾ ಉಪಗ್ರಹ 07 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿತ್ತು. ಇದರ ಮುಂದುವರೆದ ಭಾಗವಾಗಿ ಇದೀಗ SSLV-D3-EOS-08 ಮಿಷನ್ ಉಡಾವಣೆ ಮಾಡಲಾಗುತ್ತಿದೆ.
ಜನವರಿಯಲ್ಲಿ PSLV-C58/XpoSat ಮತ್ತು ಫೆಬ್ರವರಿಯಲ್ಲಿ GSLV-F14/INSAT-3DS ಮಿಷನ್‌ಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿರುವ ಇಸ್ರೋಗೆ ಇದು 2024ರ ಮೂರನೇ ಮಿಷನ್ ಆಗಿದೆ. SSLV-D3-EOS-08 ಮಿಷನ್ ಉಡಾವಣೆಗೆ ಗುರುವಾರ ತಡರಾತ್ರಿ 2.47 ನಿಮಿಷಕ್ಕೆ ಸರಿಯಾಗಿ ಆರೂವರೆ ಗಂಟೆಗಳ ಕೌಂಟ್ಡೌನ್ ಪ್ರಾರಂಭಿಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಹೇಳಿದೆ.