INDIA TO MAKE ITS OWN AI MODEL:ಇತ್ತೀಚೆಗೆ ಚೀನಾದ ಸ್ಟಾರ್ಟ್ಅಪ್ವೊಂದು ಲೋ ಕಾಸ್ಟ್ನಲ್ಲಿ ಎಐ ಮಾಡೆಲ್ ಜಗತ್ತಿಗೆ ಪರಿಚಯಿಸಿತು. ಆದರೆ ಈ ಎಐಯಿಂದ ವಿಶ್ವಾದ್ಯಂತ ಕೋಲಾಹಲಕ್ಕೆ ಕಾರಣವಾಯಿತು. ಈಗ ಭಾರತ ಸರ್ಕಾರ ತನ್ನದೇ ಆದ ಡೊಮೆಸ್ಟಿಕ್ ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ (ಎಲ್ಎಲ್ಎಮ್) ನಿರ್ಮಿಸುವ ಯೋಜನೆ ಪ್ರಕಟಿಸಿದೆ.
10,370 ಕೋಟಿ ರೂಪಾಯಿಯ ಇಂಡಿಯಾ ಎಐ ಮಿಷನ್‌ನ ಭಾಗವಾಗಿ ಮುಂಬರುವ "ಸುರಕ್ಷಿತ ಮತ್ತು ಸುಭದ್ರ" ಸ್ಥಳೀಯ AI ಮಾದರಿಯನ್ನು ಆರು ತಿಂಗಳೊಳಗೆ ಕೈಗೆಟುಕುವ ವೆಚ್ಚದಲ್ಲಿ ಬಿಡುಗಡೆ ಮಾಡಬಹುದಾಗಿದೆ. ಈ ಬಗ್ಗೆ ಕೇಂದ್ರ ರೈಲ್ವೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಅನುಮೋದಿಸಲಾದ ಒಟ್ಟು 18,693 ಗ್ರಾಫಿಕ್ಸ್ ಪ್ರೊಸೆಸ್ಸಿಂಗ್ ಯುನಿಟ್ಗಳಲ್ಲಿ (GPU) ಎಐ ಮಾಡೆಲ್ನ ಸುಮಾರು 10,000 GPUಗಳ ಕಂಪ್ಯೂಟೇಶನ್ ಸೌಲಭ್ಯದೊಂದಿಗೆ ಪ್ರಾರಂಭವಾಗುತ್ತಿದೆ ಎಂದು ಐಎಎನ್ಎಸ್ ವರದಿ ಮಾಡಿದೆ. ಉಳಿದ 8693 GPUಗಳನ್ನು ನಂತರ ಸೇರಿಸಲಾಗುವುದು. DeepSeek ಮತ್ತು ChatGPT ನಂತಹ ಮಾಡೆಲ್ಗಳಿಗೆ ಕ್ರಮವಾಗಿ 2,000 ಮತ್ತು 25,000 GPUಗಳನ್ನು ಬಳಸಿಕೊಂಡು ತರಬೇತಿ ನೀಡಲಾಗಿದೆ.
ಭಾರತೀಯ ಎಐ ಮಾದರಿಯು ಆರಂಭದಲ್ಲಿ ಸಂಶೋಧಕರು, ವಿದ್ಯಾರ್ಥಿಗಳು ಮತ್ತು ಡೆವಲಪರ್‌ಗಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡುವ ನಿರೀಕ್ಷೆಯಿದೆ. ಸಾಮಾನ್ಯ ಕಂಪ್ಯೂಟಿಂಗ್ ಸೌಲಭ್ಯವು ಎರಡು ದಿನಗಳಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಸಚಿವರು ಮಾಹಿತಿ ನೀಡಿದರು. ಈ ಸೌಲಭ್ಯವು ಭಾರತದ ವಿವಿಧ AI ಯೋಜನೆಗಳಿಗೆ ಪ್ರಮುಖ ಸಂಪನ್ಮೂಲವಾಗಿ ಕಾರ್ಯನಿರ್ವಹಿಸುತ್ತದೆ.
ಎಐ ಮಾದರಿಗಳ ಸುರಕ್ಷತೆ ಮತ್ತು ನೈತಿಕ ನಿಯೋಜನೆಗೆ ಆದ್ಯತೆ ನೀಡುವ ಮೂಲಕ, ಸರ್ಕಾರವು ಎಐ ಸೆಫ್ಟಿ ಇನ್ಸ್ಟಿಟ್ಯುಟ್ ಸ್ಥಾಪಿಸಲು ಯೋಜಿಸಿದೆ. ಭಾರತೀಯ AI ಮಾದರಿಯು ನಾವೀನ್ಯತೆ ಉತ್ತೇಜಿಸಲು ಮತ್ತು ನಾಗರಿಕ - ಕೇಂದ್ರಿತ ಆಡಳಿತ ಸಾಧನಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಇವುಗಳಲ್ಲಿ ಹಲವಾರು ಕೈಗಾರಿಕಾ ಅಪ್ಲಿಕೇಶನ್ಸ್ ಸಹ ಸೇರಿವೆ.
ಜಾಗತಿಕವಾಗಿ GPU ಪ್ರವೇಶ ವೆಚ್ಚ ಗಂಟೆಗೆ ಸುಮಾರು 2.5 ಡಾಲರ್ನಿಂದ 3 ಡಾಲರ್ವರೆಗೆ ಎಂದು ವೈಷ್ಣವ್ ಉಲ್ಲೇಖಿಸಿದ್ದಾರೆ. ಆದರೆ, ಭಾರತದ ಎಐ ಮಾಡೆಲ್ ಹೆಚ್ಚು ಕೈಗೆಟುಕುವ ದರದಲ್ಲಿರುತ್ತದೆ. ಶೇಕಡಾ 40 ರಷ್ಟು ಸರ್ಕಾರಿ ಸಬ್ಸಿಡಿಯ ನಂತರ ಗಂಟೆಗೆ ರೂ.100 ಕ್ಕಿಂತ ಕಡಿಮೆ ವೆಚ್ಚವಾಗುತ್ತದೆ ಎಂದು ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಈ ಬೆಲೆ ಚೀನಾದ ಓಪನ್ - ಸೋರ್ಸ್ ಡೀಪ್‌ಸೀಕ್ ಮಾದರಿಗಿಂತ ಸರಿಸುಮಾರು ಒಂಬತ್ತು ಪಟ್ಟು ಹೆಚ್ಚಾಗಿದೆ. ಆದರೆ, ಚಾಟ್ಜಿಪಿಟಿಯ ವೆಚ್ಚದ ಸುಮಾರು ಮೂರನೇ ಎರಡರಷ್ಟು ಆಗಿದೆ. ಹೆಚ್ಚುವರಿಯಾಗಿ ಕೈಗೆಟುಕು ದರವನ್ನು ಮತ್ತಷ್ಟು ಹೆಚ್ಚಿಸಲು ಈ ಮಾಡೆಲ್ ಆಕರ್ಷಕ 6 ತಿಂಗಳು ಮತ್ತು ವಾರ್ಷಿಕ ಯೋಜನೆಗಳನ್ನು ನೀಡುತ್ತದೆ.
ವಿಜ್ಞಾನಿಗಳು, ಸಂಶೋಧಕರು, ಡೆವಲಪರ್‌ಗಳು ಮತ್ತು ಕೋಡರ್‌ಗಳು ಭಾರತದ ಎಐ ಸಾಮರ್ಥ್ಯಗಳನ್ನು ಹೆಚ್ಚಿಸಲು ಬಹು ಮೂಲಭೂತ ಮಾದರಿಗಳಲ್ಲಿ ಸಹಯೋಗದೊಂದಿಗೆ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಪ್ರಗತಿಯ ವೇಗವನ್ನು ಗಮನಿಸಿದರೆ ಭಾರತೀಯ ಎಐ ಮಾದರಿಯು ಆರು ತಿಂಗಳೊಳಗೆ ಸಿದ್ಧವಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಸಚಿವರು ಭರವಸೆ ವ್ಯಕ್ತಪಡಿಸಿದರು. ಕಳೆದ ಒಂದೂವರೆ ವರ್ಷಗಳಲ್ಲಿ ಭಾರತವು ತನ್ನದೇ ಆದ ಮೂಲಭೂತ ಎಐ ಮಾಡೆಲ್ ಅನ್ನು ಬೆಂಬಲಿಸಲು AI ಪರಿಸರ ವ್ಯವಸ್ಥೆಯ ಚೌಕಟ್ಟನ್ನು ಅಭಿವೃದ್ಧಿಪಡಿಸುತ್ತಿದೆ.
ಓದಿ:3.71 ಕೋಟಿಯ ಹೊಸ ಮರ್ಸಿಡಿಸ್ ಕಾರನ್ನು ಮನೆಗೆ ತಂದ ಬಾಲಿವುಡ್ ಕಬೀರ್ ಸಿಂಗ್!, ಈ ಕಾರಿನಲ್ಲಿ ಏನೆಲ್ಲಾ ಇದೆ ಗೊತ್ತಾ!!