ನವದೆಹಲಿ: ಚೀನಾದಲ್ಲಿ ನನಗೆ ಬಹಳಷ್ಟು ಅಭಿಮಾನಿಗಳಿದ್ದು, ನಾನು ಕೂಡ ಚೀನಾ ದೇಶದ ಅಭಿಮಾನಿಯಾಗಿದ್ದೇನೆ ಎಂದು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಹೇಳಿದ್ದಾರೆ. ಸದ್ಯ ಮಸ್ಕ್ ಚೀನಾ ಪ್ರವಾಸದಲ್ಲಿದ್ದಾರೆ. ಚೀನಾ ಕೌನ್ಸಿಲ್ ಫಾರ್ ದಿ ಪ್ರಮೋಷನ್ ಆಫ್ ಇಂಟರ್ ನ್ಯಾಷನಲ್ ಟ್ರೇಡ್ (ಸಿಸಿಪಿಐಟಿ) ಅಧ್ಯಕ್ಷ ರೆನ್ ಹಾಂಗ್ಬಿನ್ ಅವರೊಂದಿಗೆ ಭಾನುವಾರ ನಡೆದ ಸಭೆಯಲ್ಲಿ ಮಸ್ಕ್ ಈ ವಿಷಯ ತಿಳಿಸಿದರು.
ಎಲಾನ್ ಮಸ್ಕ್ ಮಾತನಾಡಿರುವ ವೀಡಿಯೊ ಸದ್ಯ ಎಕ್ಸ್ನಲ್ಲಿ ವೈರಲ್ ಆಗಿದ್ದು, "ನಾನು ಚೀನಾದ ದೊಡ್ಡ ಅಭಿಮಾನಿಯಾಗಿದ್ದೇನೆ ಎಂಬುದನ್ನು ಹೇಳಲೇಬೇಕು. ನನಗೆ ಚೀನಾದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ ಹಾಗೂ ನಾವು ಭಾವನೆಗಳನ್ನು ಪರಸ್ಪರ ಹಂಚಿಕೊಳ್ಳುತ್ತೇವೆ" ಎಂದು ಅವರು ಹೇಳಿರುವುದು ಕಾಣಿಸುತ್ತದೆ.
ಮಸ್ಕ್ ಭಾನುವಾರ ಬೀಜಿಂಗ್ಗೆ ಅನಿರೀಕ್ಷಿತವಾಗಿ ತೆರಳಿದ್ದಾರೆ. ಚೀನಾದಲ್ಲಿ ಅವರು ಪ್ರಧಾನಿ ಲಿ ಕಿಯಾಂಗ್ ಅವರನ್ನು ಭೇಟಿಯಾದರು. "ಶಾಂಘೈ ಆರಂಭದಿಂದಲೂ ನಾವು ಅನೇಕ ವರ್ಷಗಳಿಂದ ಪರಸ್ಪರ ಪರಿಚಿತರಾಗಿದ್ದೇವೆ" ಎಂದು ಎಕ್ಸ್ನಲ್ಲಿ ಬರೆದಿರುವ ಮಸ್ಕ್, ಕಿಯಾಂಗ್ ಅವರ ಜೊತೆಗಿರುವ ಫೋಟೊ ಒಂದನ್ನು ಶೇರ್ ಮಾಡಿದ್ದಾರೆ.
ಮಸ್ಕ್ ಅವರ ಭೇಟಿಯು ಟೆಸ್ಲಾ ಆಟೋಪೈಲಟ್ ಮತ್ತು ಮೇಲ್ವಿಚಾರಣೆಯ ಸಂಪೂರ್ಣ ಸ್ವಯಂ ಚಾಲನಾ (ಎಫ್ಎಸ್ಡಿ) ತಂತ್ರಜ್ಞಾನವನ್ನು ಚೀನಾಕ್ಕೆ ತರುವ ಭರವಸೆಯನ್ನು ಹೆಚ್ಚಿಸಿದೆ. ಚೀನಾ ಎರಡನೇ ಅತಿದೊಡ್ಡ ಎಲೆಕ್ಟ್ರಿಕ್ ವಾಹನ ತಯಾರಕ ಮಾರುಕಟ್ಟೆಯಾಗಿದೆ.