How To Check Call Forwarding is ON or Not: ಇತ್ತೀಚೆನ ದಿನಗಳಲ್ಲಿ ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಚಾಟಿಂಗ್, ಕರೆ, ಗೇಮ್ಸ್ ಸೇರಿದಂತೆ ಪ್ರತಿಯೊಂದು ಸೌಲಭ್ಯವನ್ನು ಮೊಬೈಲ್ನಲ್ಲೇ ಪಡೆಯಬಹುದಾಗಿದೆ. ಹಾಗಾಗಿ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಮೊಬೈಲ್ ಬಳಕೆ ಹೆಚ್ಚಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಹ್ಯಾಕ್ ನಂತಹ ಹೆಚ್ಚಿನ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಅದರಲ್ಲೂ ನಮಗೆ ತಿಳಿಯದ ಹಾಗೇ ನಮ್ಮ ಕರೆಗಳನ್ನು ಬೇರೊಬ್ಬರು ಕೇಳಿಸಿಕೊಳ್ಳುವುದು ಮತ್ತು ಮೆಸೇಜ್ಗಳನ್ನು ಓದುವುದು ಹೆಚ್ಚಾಗುತ್ತಿದೆ. ನಿಮಗೂ ಇಂತಹ ಅನುಭವ ಆಗಿದ್ದರೆ ಕೂಡಲೇ ಎಚ್ಚೆತ್ತುಕೊಂಡು ಮುಂದಾಗಬಹುದಾದ ಅನಾಹುತಗಳನ್ನು ತಪ್ಪಿಸಬಹುದಾಗಿದೆ. ಹಾಗಾದ್ರೆ ಮೊಬೈಲ್ ಮೂಲಕವೇ ನಮ್ಮ ಕರೆ ಫಾರ್ವರ್ಡ್ ಅನ್ನು ಹೇಗೆ ಪತ್ತೆಹಚ್ಚಬಹುದೆಂದು ಇಲ್ಲಿ ತಿಳಿಯಿರಿ.
ಕಾಲ್ - ಮೆಸೇಜ್ ಫಾರ್ವರ್ಡಿಂಗ್:ಯಾರೋ ಅಪರಿಚಿತ ವ್ಯಕ್ತಿಗಳು ನಮ್ಮ ಬಳಿಗೆ ಬಂದು ತುರ್ತಾಗಿ ಮನೆಯವರಿಗೆ ಅಥವಾ ಸಂಬಂಧಿಕರಿಗೆ ಕರೆ ಮಾಡಲು ಕೇಳಿದರೇ ನಾವು ಒಂದು ಕ್ಷಣ ಯೋಚಿಸದೇ ತಕ್ಷಣವೇ ಅವರ ಕೈಗೆ ಮೊಬೈಲ್ ನೀಡುತ್ತೇವೆ. ಒಂದು ವೇಳೆ ನಮ್ಮ ಫೋನ್ ಪಡೆದ ವ್ಯಕ್ತಿ ವಂಚಕನಾಗಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಅವರು ನಮಗೆ ತಿಳಿಯದಂತೆ ಕ್ಷಣಾರ್ಧದಲ್ಲಿ ನಮ್ಮ ಫೋನ್‌ನಲ್ಲಿ ಕರೆ ಮತ್ತು ಮೆಸೇಜ್ ಫಾರ್ವರ್ಡ್ ಆಯ್ಕೆ ಆನ್ ಮಾಡಿ ಬಿಡುತ್ತಾರೆ. ಇದರಿಂದ ಸುಲಭವಾಗಿ ನಮ್ಮ ಫೋನ್ ಕರೆಗಳು ಮತ್ತು ಸಂದೇಶಗಳು ಅವರ ಫೋನ್‌ಗೆ ಫಾರ್ವರ್ಡ್ ಆಗುತ್ತವೆ.
ಮೊದಲಿಗೆ ನಮ್ಮ ಮೊಬೈಲ್ ಪಡೆದ ಅವರು ಗೊತ್ತಿಲ್ಲದಂತೆ ನಮ್ಮ ಫೋನ್ ಕೀ ಪ್ಯಾಡ್‌ನಲ್ಲಿ *401* ಎಂದು ಟೈಪ್ ಮಾಡಿ ಬಳಿಕ ಅವರ ಫೋನ್ ಸಂಖ್ಯೆಯನ್ನು ನಮೂದಿಸಿ ಡಯಲ್ ಮಾಡಿದರೆ ನಮ್ಮ ಎಲ್ಲಾ ಕರೆಗಳು ಮತ್ತು ಸಂದೇಶಗಳು ನಮಗೆ ತಿಳಿಯದಂತೆ ಆ ಸಂಖ್ಯೆಗೆ ಫಾರ್ವರ್ಡ್ ಆಗುತ್ತವೆ. ಇದರಿಂದಾಗಿ ನಮ್ಮ ಸಾಮಾನ್ಯ ಸಂದೇಶಗಳು ಮಾತ್ರವಲ್ಲದೆ, ನಮ್ಮ UPI ಮತ್ತು ಬ್ಯಾಂಕ್ ಖಾತೆಗೆ ಸಂಬಂಧಿಸಿದ ಎಲ್ಲಾ OTP ಗಳು ಆ ಸಂಖ್ಯೆಗೆ ಫಾರ್ವರ್ಡ್ ಆಗುತ್ತವೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ನಮ್ಮ ಕರೆ ಮತ್ತು ಸಂದೇಶಗಳು ಫಾರ್ವರ್ಡ್ ಆಗಿವೆಯೇ ಎಂದು ಪರಿಶೀಲಿಸುವುದು ಹೇಗೆ?
- ನಿಮ್ಮ ಫೋನ್ ಕರೆಗಳು ಮತ್ತು ಸಂದೇಶಗಳನ್ನು ಮತ್ತೊಂದು ಸಂಖ್ಯೆಗೆ ಫಾರ್ವರ್ಡ್ ಮಾಡಲಾಗುತ್ತಿದ್ದರೆ ಅದನ್ನು ಮೊಬೈಲ್ನಲ್ಲಿಯೇ ಪತ್ತೆ ಹಚ್ಚಿ ನಿಲ್ಲಸಬಹುದಾಗಿದೆ.
- ಇದಕ್ಕಾಗಿ ಮೊದಲು ನಿಮ್ಮ ಫೋನ್ ಕೀಪ್ಯಾಡ್‌ನಲ್ಲಿ *#21# ಎಂದು ಟೈಪ್ ಮಾಡಿ ಮತ್ತು ಡಯಲ್ ಮಾಡಿ.
- ನೀವು ಇದನ್ನು ಮಾಡಿದರೆ, ನಿಮ್ಮ ಫೋನ್‌ನಲ್ಲಿ ಕರೆಗಳು ಮತ್ತು ಸಂದೇಶಗಳನ್ನು ಫಾರ್ವರ್ಡ್ ಮಾಡಲಾಗುತ್ತಿದೆಯೇ? ಅಥವಾ ಇಲ್ಲವೇ ಎಂದು ಡಿಸ್ಪ್ಲೇ ಮೇಲೆ ಪ್ರದರ್ಶಿಸಲಾಗುತ್ತದೆ.
ಕಾಲ್ ಫಾರ್ವರ್ಡ್ ಆಯ್ಕೆಯನ್ನು ನಿಷ್ಕ್ರಿಯಗೊಳಿವುದು ಹೇಗೆ?
- ನಿಮ್ಮ ಫೋನ್ ಕರೆಗಳು ಮತ್ತು ಸಂದೇಶಗಳನ್ನು ಫಾರ್ವರ್ಡ್ ಮಾಡಲಾಗುತ್ತಿದ್ದರೆ.. ಆಯ್ಕೆಯನ್ನು ಸಕ್ರಿಯಗೊಳಿಸಲಾಗಿದೆ ಎಂದು ತೋರಿಸುತ್ತದೆ.
- ನಂತರ ತಕ್ಷಣವೇ ಆ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿ.
- ಇದಕ್ಕಾಗಿ.. ನಿಮ್ಮ ಕೀಪ್ಯಾಡ್‌ನಲ್ಲಿ ##002# ಎಂದು ಟೈಪ್ ಮಾಡಿ ಮತ್ತು ಡಯಲ್ ಮಾಡಿ. ತಕ್ಷಣವೇ ಫಾರ್ವರ್ಡ್ ಆಯ್ಕೆ ನಿಷ್ಕ್ರಿಯಗೊಳ್ಳುತ್ತದೆ. ಇದರಿಂದ ಆಗಬಹುದಾದ ಅನಾಹುತಗಳನ್ನು ತಪ್ಪಿಸಬಹುದಾಗಿದೆ.
ಇದನ್ನೂ ಓದಿ:ದೇಶದಲ್ಲಿ ಹೆಚ್ಚುತ್ತಿದೆ ಹ್ಯಾಕಿಂಗ್; ನಾಲ್ವರಲ್ಲಿ ಒಬ್ಬರ ಮೇಲೆ ಸೈಬರ್ ದಾಳಿ! - Indians faced hacking attacks