ಬಾಲಸೋರ್ (ಒಡಿಶಾ): DRDOಬುಧವಾರ ಕ್ಷಿಪಣಿ ಪ್ರಯೋಗಾರ್ಥ ಪರೀಕ್ಷೆ ನಡೆಸಲಿದೆ. ಇದಕ್ಕೂ ಮುಂಚಿತವಾಗಿ ಒಡಿಶಾದ ಬಾಲಸೋರ್ ಜಿಲ್ಲಾಡಳಿತವು 10 ಹಳ್ಳಿಗಳಿಂದ 10,000 ಕ್ಕೂ ಹೆಚ್ಚು ಜನರನ್ನು ತಾತ್ಕಾಲಿಕವಾಗಿ ಬೇರೆಡೆಗೆ ಸ್ಥಳಾಂತರಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡಿಆರ್‌ಡಿಒ ಕ್ಷಿಪಣಿ ಪರೀಕ್ಷೆಗೆ ಅಗತ್ಯವಾದ ಶ್ರೇಣಿಯ ಸಿದ್ಧತೆಯನ್ನು ಚಂಡಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಲ್ಲಿ (ಐಟಿಆರ್) ಪೂರ್ಣಗೊಳಿಸಿದೆ ಎಂದು ರಕ್ಷಣಾ ಮೂಲಗಳು ಮಂಗಳವಾರ ತಿಳಿಸಿವೆ. ಐಟಿಆರ್‌ನ ಲಾಂಚ್ ಪ್ಯಾಡ್ ಸಂಖ್ಯೆ 3 ರಿಂದ ಪರೀಕ್ಷೆಯನ್ನು ನಡೆಸಲಾಗುತ್ತದೆ. ಏತನ್ಮಧ್ಯೆ, ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಗೂ ಮುನ್ನ ಲಾಂಚ್ ಪ್ಯಾಡ್‌ನ 3.5 ಕಿಮೀ ವ್ಯಾಪ್ತಿಯಲ್ಲಿರುವ 10 ಗ್ರಾಮಗಳಿಗೆ ಸೇರಿದ ಸುಮಾರು 10,581 ಜನರನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲು ಬಾಲಸೋರ್ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ ಎಂದು ಕಂದಾಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಯಾವುದೇ ಅಪಾಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸುರಕ್ಷತಾ ಕ್ರಮವಾಗಿ ಸಂತ್ರಸ್ತ ಜನರಿಗೆ ಸೂಕ್ತ ಪರಿಹಾರದೊಂದಿಗೆ ಈ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವಲಯದಲ್ಲಿ ಬರುವ ನಿವಾಸಿಗಳನ್ನು ಸಮೀಪದ ತಾತ್ಕಾಲಿಕ ಆಶ್ರಯ ಕೇಂದ್ರಗಳಿಗೆ ಸುಗಮವಾಗಿ ಸ್ಥಳಾಂತರಿಸಲು ಜಿಲ್ಲಾಧಿಕಾರಿ ಆಶಿಸ್ ಠಾಕರೆ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸಾಗರಿಕಾ ನಾಥ್ ಮಾರ್ಗದರ್ಶನಲ್ಲಿ ಜಿಲ್ಲಾಡಳಿತದಿಂದ ಮಂಗಳವಾರ ಪೂರ್ವಸಿದ್ಧತಾ ಸಭೆಗಳನ್ನು ನಡೆಸಲಾಯಿತು ಎಂದು ಕಂದಾಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.