ನವದೆಹಲಿ: ಗೂಗಲ್, ಎನ್ವಿಡಿಯಾ ಮತ್ತು ಹುವಾವೇಯಂಥ ತಂತ್ರಜ್ಞಾನ ಕಂಪನಿಗಳು ಅಭಿವೃದ್ಧಿಪಡಿಸಿದ ಎಐ ಆಧರಿತ ತಂತ್ರಜ್ಞಾನಗಳು ಪ್ರಬಲ ಚಂಡಮಾರುತಗಳ ಚಲನೆ ಮತ್ತು ಅವುಗಳ ತೀವ್ರತೆಯನ್ನು ತ್ವರಿತ ಹಾಗೂ ನಿಖರವಾಗಿ ಊಹಿಸಬಲ್ಲವು ಎಂದು ಹೊಸ ಅಧ್ಯಯನವೊಂದು ಸೋಮವಾರ ತಿಳಿಸಿದೆ.
ಯಂತ್ರ ಕಲಿಕೆ (ಎಂಎಲ್) ಆಧಾರಿತ ಹವಾಮಾನ ಮುನ್ಸೂಚನೆಗಳು ಸಾಂಪ್ರದಾಯಿಕ ಮುನ್ಸೂಚನೆಗಳಿಗೆ ಸಮಾನ ನಿಖರತೆಯ ಮುನ್ಸೂಚನೆಗಳನ್ನು ವೇಗವಾಗಿ, ಅಗ್ಗವಾಗಿ ಮತ್ತು ಕಡಿಮೆ ಕಂಪ್ಯೂಟಿಂಗ್ ಶಕ್ತಿಯನ್ನು ಬಳಸಿಕೊಂಡು ಉತ್ಪಾದಿಸಬಹುದು ಎಂದು ಎನ್ಪಿಜೆ ಕ್ಲೈಮೇಟ್ ಅಂಡ್ ಅಟ್ಮಾಸ್ಫಿಯರ್ ಸೈನ್ಸ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.
ನವೆಂಬರ್ 2023 ರಲ್ಲಿ ಉತ್ತರ ಮತ್ತು ಮಧ್ಯ ಯುರೋಪ್ಗೆ ಅಪ್ಪಳಿಸಿದ ಸಿಯಾರನ್ ಚಂಡಮಾರುತವನ್ನು ವಿಶ್ಲೇಷಿಸಿ ಈ ತಂತ್ರಜ್ಞಾನವನ್ನು ಸಂಶೋಧಕರು ಪರೀಕ್ಷೆ ಮಾಡಿದ್ದಾರೆ.
"ಎಐ ತಂತ್ರಜ್ಞಾನವು ಸಾಕಷ್ಟು ಮುಂಚಿತವಾಗಿಯೇ ಹವಾಮಾನ ಮುನ್ಸೂಚನೆ ನೀಡುತ್ತಿದೆ. ಎರಡು ವರ್ಷಗಳ ಹಿಂದೆ, ಹವಾಮಾನ ಮುನ್ಸೂಚನೆಗಳಿಗಾಗಿ ಆಧುನಿಕ ಎಂಎಲ್ ತಂತ್ರಜ್ಞಾನವನ್ನು ಅತ್ಯಂತ ವಿರಳವಾಗಿ ಬಳಸಲಾಗುತ್ತಿತ್ತು. ಆದರೆ, ಈಗ ಕೆಲವೇ ನಿಮಿಷಗಳಲ್ಲಿ 10 ದಿನಗಳ ಜಾಗತಿಕ ಹವಾಮಾನ ಮುನ್ಸೂಚನೆಗಳನ್ನು ನೀಡುವ ಎಐ ತಂತ್ರಜ್ಞಾನ ಮಾದರಿಗಳನ್ನು ನಾವು ತಯಾರಿಸಿದ್ದೇವೆ" ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ಪ್ರೊಫೆಸರ್ ಆಂಡ್ರ್ಯೂ ಚಾರ್ಲ್ಟನ್ - ಪೆರೆಜ್ ಹೇಳಿದರು.