ನವದೆಹಲಿ: ಜಾಗತಿಕ ಪಿಸಿ ಮಾರುಕಟ್ಟೆ 2023 ರಲ್ಲಿ ಶೇಕಡಾ 14 ರಷ್ಟು (ವರ್ಷದಿಂದ ವರ್ಷಕ್ಕೆ) ಕುಸಿತ ಕಂಡಿದೆ ಎಂದು ಹೊಸ ವರದಿ ತಿಳಿಸಿದೆ. ವಾಣಿಜ್ಯ ಮತ್ತು ಗ್ರಾಹಕ ಕ್ಷೇತ್ರಗಳಲ್ಲಿನ ಮಂದಗತಿಯಿಂದಾಗಿ ಪಿಸಿ ಮಾರಾಟದಲ್ಲಿ ಇಳಿಕೆಯಾಗಿದೆ. ಜಾಗತಿಕ ಪಿಸಿ ಮಾರುಕಟ್ಟೆಯು 2023 ರ ನಾಲ್ಕನೇ ತ್ರೈಮಾಸಿಕವನ್ನು (ಕ್ಯೂ 4) ಶೇಕಡಾ 0.2 ರಷ್ಟು (ವರ್ಷದಿಂದ ವರ್ಷಕ್ಕೆ) ಮಾರಾಟ ಕುಸಿತದೊಂದಿಗೆ ಕೊನೆಗೊಳಿಸಿದೆ. ಕೌಂಟರ್ ಪಾಯಿಂಟ್ ರಿಸರ್ಚ್ ಪ್ರಕಾರ, ಇದು ವರ್ಷದಿಂದ ವರ್ಷಕ್ಕೆ ರಫ್ತು ಕುಸಿತದ ಸತತ ಎಂಟನೇ ತ್ರೈಮಾಸಿಕವಾಗಿದೆ.
"ವರ್ಷಾಂತ್ಯದ ರಜಾಕಾಲದಲ್ಲಿ ಕೂಡ ಮಾರಾಟ ಚೇತರಿಕೆಯಾಗಿಲ್ಲ. ಒಇಎಂಗಳು ಮತ್ತು ಒಡಿಎಂಗಳು 2024 ರ 2 ಮತ್ತು 3ನೇ ತ್ರೈಮಾಸಿಕದಲ್ಲಿ ಮಾರಾಟ ಮತ್ತೆ ಚೇತರಿಸಿಕೊಳ್ಳಲಿದೆ ಎಂದು ನಿರೀಕ್ಷಿಸಿವೆ" ಎಂದು ವಿಶ್ಲೇಷಕರು ಹೇಳಿದ್ದಾರೆ. ವರದಿಯ ಪ್ರಕಾರ, ಪಿಸಿ ಒಇಎಂಗಳ (ಮೂಲ ಉಪಕರಣ ತಯಾರಕ) ಮಾರಾಟ ಪ್ರಮಾಣ 2023 ರಾದ್ಯಂತ ಬದಲಾಗದೆ ಉಳಿದಿವೆ. ಕಡಿಮೆ ಬೇಡಿಕೆ ಮತ್ತು ಹೆಚ್ಚಿನ ದಾಸ್ತಾನುಗಳು ಮಾರುಕಟ್ಟೆಯಾದ್ಯಂತ ಮಾರಾಟ ಹೆಚ್ಚಳಕ್ಕೆ ಅಡ್ಡಿಯಾಗಿರುವುದೇ ಇದಕ್ಕೆ ಕಾರಣವಾಗಿದೆ.
2023 ರಲ್ಲಿ ಲೆನೊವೊ ಮತ್ತು ಎಚ್ಪಿ ಕ್ರಮವಾಗಿ 24 ಪ್ರತಿಶತ ಮತ್ತು 21 ಪ್ರತಿಶತ ಮಾರುಕಟ್ಟೆ ಪಾಲಿನೊಂದಿಗೆ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿವೆ. ಎಚ್ಪಿ ಉತ್ತರ ಅಮೆರಿಕದ ಮಾರುಕಟ್ಟೆಯಲ್ಲಿ ತುಲನಾತ್ಮಕವಾಗಿ 5 ಪ್ರತಿಶತದಷ್ಟು (ವರ್ಷದಿಂದ ವರ್ಷಕ್ಕೆ) ಮಾರಾಟ ಕುಸಿತ ದಾಖಲಿಸಿದೆ. ಶೇ 16 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿರುವ ಡೆಲ್, ನಿಧಾನಗತಿಯ ವಾಣಿಜ್ಯ ಬೇಡಿಕೆಯಿಂದಾಗಿ ಶೇಕಡಾ 20 ರಷ್ಟು ಮಾರಾಟ ಕುಸಿತ ಅನುಭವಿಸಿದೆ. ಶೇಕಡಾ 14 ರಷ್ಟು ಮಾರಾಟ ಕುಸಿತದೊಂದಿಗೆ ಆ್ಯಪಲ್ 2023 ರಲ್ಲಿ ಸರಿಸುಮಾರು 9 ಪ್ರತಿಶತದಷ್ಟು ಮಾರುಕಟ್ಟೆ ಪಾಲು ಹೊಂದಿದೆ.