ನವದೆಹಲಿ :ಭಾರತೀಯರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ನಿರ್ಧಾರ ಘೋಷಿಸಿದ ಆರು ವರ್ಷಗಳ ನಂತರ, ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಕಳೆದ ನಾಲ್ಕು ವರ್ಷಗಳಿಂದ ರಹಸ್ಯವಾಗಿ ಈ ಬಗ್ಗೆ ತರಬೇತಿ ಪಡೆಯುತ್ತಿರುವ ನಾಲ್ವರು ಆಯ್ದ ಗಗನಯಾತ್ರಿಗಳ ಹೆಸರನ್ನು ಜಗತ್ತಿಗೆ ಪ್ರಸ್ತುತಪಡಿಸಿದರು. ಆದರೆ ಬಾಹ್ಯಾಕಾಶಕ್ಕೆ ತೆರಳಲು ಸಿದ್ಧವಾಗುತ್ತಿರುವ, ಭಾರತೀಯ ವಾಯುಪಡೆಯ ಪರೀಕ್ಷಾ ಪೈಲಟ್ಗಳಾದ ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್, ಗ್ರೂಪ್ ಕ್ಯಾಪ್ಟನ್ ಅಜಿತ್ ಕೃಷ್ಣನ್, ಗ್ರೂಪ್ ಕ್ಯಾಪ್ಟನ್ ಅಂಗದ್ ಪ್ರತಾಪ್ ಮತ್ತು ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ ಇವರೆಲ್ಲರೂ ಈಗ ಭಾರತದ ಮೊದಲ ಗಗನಯಾತ್ರಿಗಳು ಎಂದು ನೀವು ಅಂದುಕೊಂಡಿರಬಹುದು.
ಇಲ್ಲೊಂದು ಟ್ವಿಸ್ಟ್ ಇದೆ. ಇವರು ಸಾಮಾನ್ಯ ಪರಿಭಾಷೆಯಲ್ಲಿ ಗಗನಯಾತ್ರಿಗಳೇ ಆಗಿದ್ದಾರೆ. ಆದರೂ ಇವರನ್ನು ನಿರ್ದಿಷ್ಟವಾಗಿ ವಿಶ್ವದ ಪ್ರಥಮ ವ್ಯೋಮನೌಟ್ಸ್ (vyomanauts) ಎಂದು ಕರೆಯಲಾಗುತ್ತದೆ. ಅದು ಯಾಕೆ ಎಂಬ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ.
1984ರ ಏಪ್ರಿಲ್ 3ರಂದು ಸೋವಿಯತ್ ಇಂಟರ್ ಕಾಸ್ಮೋಸ್ ಕಾರ್ಯಕ್ರಮದ ಭಾಗವಾಗಿ ಸೊಯುಜ್ ಟಿ-11 ಬಾಹ್ಯಾಕಾಶ ನೌಕೆಯ ಮೂಲಕ ಹಾರಾಟ ನಡೆಸಿದ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಅವರನ್ನು ಗಗನಯಾತ್ರಿ ಎಂದು ಕರೆಯಲಾಗುತ್ತದೆ. ಆದರೆ ನಾಯರ್, ಕೃಷ್ಣನ್, ಪ್ರತಾಪ್ ಮತ್ತು ಶುಕ್ಲಾ ಇವರು ಭಾರತದ ಮೊದಲ ಗಗನಯಾತ್ರಿಗಳಲ್ಲ. ವಾಸ್ತವವಾಗಿ, ಅವರು ವಿಶ್ವದ ಮೊದಲ ವ್ಯೋಮನೌಟ್ಗಳಾಗಲಿದ್ದಾರೆ.
ಬಾಹ್ಯಾಕಾಶಕ್ಕೆ ಪ್ರಯಾಣಿಸುವವರನ್ನು ಸಾಮಾನ್ಯವಾಗಿ ಅವರ ರಾಷ್ಟ್ರೀಯ ಮೂಲ ಅಥವಾ ಭಾಷೆಯ ಆಧಾರದ ಮೇಲೆ ಹೆಸರಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಇದು ಮಾನವ ಬಾಹ್ಯಾಕಾಶ ಪರಿಶೋಧನಾ ಕಾರ್ಯಕ್ರಮಗಳಲ್ಲಿ ಐತಿಹಾಸಿಕವಾಗಿ ಬೆಳೆದು ಬಂದ ಸಂಪ್ರದಾಯವಾಗಿದೆ. ತನ್ನ ಸ್ವಂತದ ಬಾಹ್ಯಾಕಾಶ ಯೋಜನೆಯನ್ನು ಹೊಂದಿರುವ ಪ್ರತಿಯೊಂದು ದೇಶವು ತನ್ನ ಬಾಹ್ಯಾಕಾಶ ಪ್ರಯಾಣಿಕರನ್ನು ಉಲ್ಲೇಖಿಸಲು ನಿರ್ದಿಷ್ಟ ಪದವನ್ನು ಬಳಸುತ್ತದೆ. ಇದು ಭಾಷೆ ಮತ್ತು ಸಾಂಸ್ಕೃತಿಕ ಅಂಶಗಳನ್ನು ಪ್ರತಿಬಿಂಬಿಸುತ್ತದೆ.
ಯುಎಸ್, ಅಂದಿನ ಸೋವಿಯತ್ ಗಣರಾಜ್ಯಗಳ ಒಕ್ಕೂಟ (ಯುಎಸ್ಎಸ್ಆರ್) ಅಥವಾ ಇಂದಿನ ರಷ್ಯಾ ಮತ್ತು ಚೀನಾದ ನಂತರ ಸ್ವಂತವಾಗಿ ಮಾನವ ಬಾಹ್ಯಾಕಾಶ ಪ್ರಯಾಣ ಯೋಜನೆಯನ್ನು ತಯಾರಿಸಿದ ನಾಲ್ಕನೇ ದೇಶ ಭಾರತವಾಗಿದೆ. ಯುಎಸ್ ತನ್ನ ಬಾಹ್ಯಾಕಾಶ ಪ್ರಯಾಣಿಕರನ್ನು ಆಸ್ಟ್ರೋನೌಟ್ಸ್ (astronauts) ಎಂದು ಕರೆದರೆ, ರಷ್ಯನ್ನರು ತಮ್ಮ ಬಾಹ್ಯಾಕಾಶ ಪ್ರಯಾಣಿಕರನ್ನು ಕಾಸ್ಮೋನೌಟ್ಸ್ (cosmonauts) ಎಂದು ಕರೆಯುತ್ತಾರೆ. ಹಾಗೆಯೇ ಬಾಹ್ಯಾಕಾಶಕ್ಕೆ ಪ್ರಯಾಣಿಸುವ ಚೀನೀ ಜನರನ್ನು ತೈಕೊನೌಟ್ಸ್ (taikonauts) ಎಂದು ಕರೆಯಲಾಗುತ್ತದೆ.
ಬಾಹ್ಯಾಕಾಶ ಪ್ರಯಾಣಿಕರಿಗೆ ಅವರ ರಾಷ್ಟ್ರೀಯ ಮೂಲ ಅಥವಾ ಭಾಷೆಯ ಆಧಾರದ ಮೇಲೆ ಹೆಸರಿಸುವ ಸಂಪ್ರದಾಯವು ಯುಎಸ್ ಮತ್ತು ಯುಎಸ್ಎಸ್ಆರ್ ನಡುವಿನ ಶೀತಲ ಸಮರದ ಯುಗದ ಬಾಹ್ಯಾಕಾಶ ಯಾನದ ಪೈಪೋಟಿಯ ಐತಿಹಾಸಿಕ ಸನ್ನಿವೇಶದಲ್ಲಿ ಬೇರೂರಿದೆ. ಮಾನವ ಬಾಹ್ಯಾಕಾಶ ಪರಿಶೋಧನೆಯ ಆರಂಭಿಕ ವರ್ಷಗಳಲ್ಲಿ ವಿಶ್ವದ ದೇಶಗಳು ತನ್ನದೇ ಆದ ಮಾನವ ಬಾಹ್ಯಾಕಾಶ ಯಾನ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಿವೆ. ಹಾಗೆ ಮಾಡುವಾಗ ಆಯಾ ರಾಷ್ಟ್ರಗಳು ತನ್ನ ರಾಷ್ಟ್ರೀಯ ಗುರುತು, ಸಾಂಸ್ಕೃತಿಕ ಹೆಮ್ಮೆ ಮತ್ತು ಆ ಕಾಲದ ರಾಜಕೀಯ ಸಂದರ್ಭಕ್ಕೆ ಅನುಗುಣವಾಗಿ ಗಗನಯಾತ್ರಿಗಳಿಗೆ ವಿಭಿನ್ನವಾಗಿ ಹೆಸರಿಡಲು ಆರಂಭಿಸಿದವು.
ಯುಎಸ್ 1950 ರ ದಶಕದ ಕೊನೆಯಲ್ಲಿ ಮತ್ತು 1960 ರ ದಶಕದ ಆರಂಭದಲ್ಲಿ ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಅಡಿಯಲ್ಲಿ ತನ್ನ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಇದಕ್ಕಾಗಿ ತನ್ನ ಗಗನಯಾತ್ರಿಗಳಿಗೆ ಅದು ಆಸ್ಟ್ರೋನೌಟ್ ಎಂಬ ಪದವನ್ನು ಬಳಸಿತು. ಆಸ್ಟ್ರೋನೌಟ್ ಇದು ಗ್ರೀಕ್ ಮೂಲದ ಪದವಾಗಿದ್ದು, ಶಾಂತಿಯುತ ಬಾಹ್ಯಾಕಾಶ ಪರಿಶೋಧನೆಗೆ ಅಮೆರಿಕದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಗ್ರೀಕ್ ಭಾಷೆಯಲ್ಲಿ, "ಆಸ್ಟ್ರಾನ್" ಎಂದರೆ ನಕ್ಷತ್ರ, ಮತ್ತು "ನೌಟ್ಸ್" ಎಂದರೆ ನಾವಿಕ. ಹೀಗಾಗಿ ಗಗನಯಾತ್ರಿ ಎಂಬ ಪದವನ್ನು "ನಕ್ಷತ್ರ ನಾವಿಕ" (star sailor) ಎಂದು ಅನುವಾದಿಸಬಹುದು.
ಬಾಹ್ಯಾಕಾಶ ನೌಕೆಯ ಸಿಬ್ಬಂದಿಯನ್ನು ಆಸ್ಟ್ರೋನೌಟ್ಸ್ ಎಂದು ಕರೆಯಬೇಕಾ ಅಥವಾ ಕಾಸ್ಮೋನೌಟ್ಸ್ ಎಂದು ಕರೆಯಬೇಕಾ ಎಂಬ ಬಗ್ಗೆ ಆಗಿನ ನಾಸಾ ಆಡಳಿತಾಧಿಕಾರಿ ಟಿ ಕೀತ್ ಗ್ಲೆನನ್ ಮತ್ತು ಅವರ ಉಪ ಆಡಳಿತಾಧಿಕಾರಿ ಹಗ್ ಡ್ರೈಡೆನ್ ಚರ್ಚೆ ಮಾಡಿದ್ದರು. ಈ ಸಂದರ್ಭದಲ್ಲಿ ಡ್ರೈಡನ್ ಅವರು ಕಾಸ್ಮೋನೌಟ್ ಎಂಬ ಪದಕ್ಕೆ ಆದ್ಯತೆ ನೀಡಿದರು. ನೌಕೆಗಳು ವಿಶಾಲವಾದ ಬ್ರಹ್ಮಾಂಡದಲ್ಲಿ ಚಲಿಸುವುದರಿಂದ ಅವರು ಈ ಪದಕ್ಕೆ ಒತ್ತು ನೀಡಿದ್ದರು. ಆಸ್ಟ್ರೋ ಎಂಬ ಪೂರ್ವಪ್ರತ್ಯಯವು ನಿರ್ದಿಷ್ಟವಾಗಿ ನಕ್ಷತ್ರಗಳಿಗೆ ಹಾರಾಟವನ್ನು ಸೂಚಿಸುತ್ತದೆ. ಆದಾಗ್ಯೂ, ಹೆಚ್ಚಿನ ನಾಸಾ ಸ್ಪೇಸ್ ಟಾಸ್ಕ್ ಗ್ರೂಪ್ ಸದಸ್ಯರು ಆಸ್ಟ್ರೋನೌಟ್ ಪದಕ್ಕೆ ಆದ್ಯತೆ ನೀಡಿದರು. ಹೀಗಾಗಿ ಇದು ಸಾಮಾನ್ಯ ಬಳಕೆಯ, ಆದ್ಯತೆಯ ಅಮೇರಿಕನ್ ಪದವಾಗಿ ಉಳಿದುಕೊಂಡಿದೆ.
ಅಮೇರಿಕನ್ ಬರಹಗಾರ ನೀಲ್ ಆರ್. ಜೋನ್ಸ್ ತನ್ನ 1930 ರ ಸಣ್ಣ ಕಥೆ ದಿ ಡೆತ್ಸ್ ಹೆಡ್ ಮೆಟಿಯೋರ್ (The Death’s Head Meteor) ನಲ್ಲಿ ಆಸ್ಟ್ರೋನೌಟ್ ಎಂಬ ಪದವನ್ನು ಅದರ ಸಮಕಾಲೀನ ಅರ್ಥದಲ್ಲಿ ಮೊದಲ ಬಾರಿಗೆ ಬಳಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಆದಾಗ್ಯೂ, ಈ ಪದವು ಮೊದಲೇ ಕಾಣಿಸಿಕೊಂಡಿತ್ತು. ಉದಾಹರಣೆಗೆ- ಪರ್ಸಿ ಗ್ರೆಗ್ ಇದನ್ನು 1880 ರಲ್ಲಿ ತನ್ನ ಪುಸ್ತಕ ಅಕ್ರಾಸ್ ದಿ ಜೋಡಿಯಾಕ್ನಲ್ಲಿ ಬಳಸಿದ್ದರು. ಇದರಲ್ಲಿ ಗಗನಯಾತ್ರಿಗೆ ಆಸ್ಟ್ರೋನೌಟ್ ಎಂಬ ಪದವನ್ನು ಬಳಸಲಾಗಿತ್ತು.