ನವದೆಹಲಿ: ಮುಂದಿನ ವರ್ಷದ ಅಂತ್ಯದ ವೇಳೆಗೆ 6 ಕಿ.ಮೀ ಕಡಲಾಳದಲ್ಲಿ ಅಧ್ಯಯನ ಮಾಡಲು ಸಮುದ್ರದಾಳಕ್ಕೆ ಭಾರತ ತನ್ನ ವಿಜ್ಞಾನಿಗಳನ್ನು ಕಳುಹಿಸಲಿದೆ ಎಂದು ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ಪಿಟಿಐಗೆ ನೀಡಿದ ವೀಡಿಯೊ ಸಂದರ್ಶನದಲ್ಲಿ ಮಾತನಾಡಿದ ರಿಜಿಜು, "ಸಮುದ್ರದ ಅಡಿಯಲ್ಲಿ 6,000 ಮೀಟರ್ ಆಳದವರೆಗೆ ಮಾನವರನ್ನು ಕರೆದೊಯ್ಯುವ ಭಾರತದ ಆಳ ಸಾಗರ ಜಲಾಂತರ್ಗಾಮಿ ಮತ್ಸ್ಯ 6000 ನಿರ್ಮಾಣ ಕಾರ್ಯ ಉತ್ತಮವಾಗಿ ಸಾಗುತ್ತಿದ್ದು, ಈ ವರ್ಷಾಂತ್ಯದ ವೇಳೆಗೆ ಜಲಾಂತರ್ಗಾಮಿಯ ಪರೀಕ್ಷೆ ನಡೆಯಬಹುದು" ಎಂದು ಹೇಳಿದರು.
"ಸಮುದ್ರಯಾನ ಯೋಜನೆಯ ಬಗ್ಗೆ ಮಾತನಾಡುವುದಾದರೆ, ಇದು ಸಮುದ್ರದ ಒಳಗೆ 6 ಕಿ.ಮೀ ಅಂದರೆ 6000 ಮೀಟರ್ ಆಳಕ್ಕೆ ಇಳಿಯುವ ಯೋಜನೆಯಾಗಿದೆ. ಸೂರ್ಯನ ಬೆಳಕು ಸಹ ತಲುಪಲಾರದಷ್ಟು ಕಡಲಾಳ ಇದಾಗಿದೆ. ಇದಕ್ಕಾಗಿ ಮಾನವರನ್ನು ಕಡಲಾಳಕ್ಕೆ ಕರೆದೊಯ್ಯಬಲ್ಲ ಮತ್ಸ್ಯ ಜಲಾಂತರ್ಗಾಮಿ ಯಂತ್ರ ತಯಾರಿಕೆ ಯೋಜನೆ ಸರಿಯಾದ ಹಾದಿಯಲ್ಲಿ ಸಾಗುತ್ತಿದೆ" ಎಂದು ಅವರು ತಿಳಿಸಿದರು.
ತಾವು ಸ್ವತಃ ಈ ಯೋಜನೆಯನ್ನು ಪರಿಶೀಲಿಸಿರುವುದಾಗಿ ಮತ್ತು ವಿಜ್ಞಾನಿಗಳು ಈ ವರ್ಷದ ಅಂತ್ಯದ ವೇಳೆಗೆ ಮೊದಲ ಆಳ ನೀರಿನ ಅಧ್ಯಯನ ನಡೆಸಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.