Nitin Gadkari Statement: ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ (ಇವಿ) ಅಳವಡಿಕೆ ಹೆಚ್ಚಾದಂತೆ, ಮುಂದಿನ ಎರಡು ವರ್ಷಗಳಲ್ಲಿ ಇವಿಗಳ ವೆಚ್ಚವು ಬಹುತೇಕ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗೆ ಹೊಂದಿಕೆಯಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಆಟೋಮೋಟಿವ್ ಕಾಂಪೊನೆಂಟ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ACMA) ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ವಿಶ್ವದ ಅತ್ಯುತ್ತಮ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಇಚ್ಛಿಸುವ ಆಟೋ ಕಂಪನಿಗಳಿಗೆ ಉದ್ಯಮದಲ್ಲಿ ಉತ್ತಮ ಭವಿಷ್ಯವಿದೆ. ಇದು ವೆಚ್ಚ ಕಡಿಮೆ ಮಾಡುವುದಲ್ಲದೇ, ಮಾಲಿನ್ಯವೂ ಸಾಕಷ್ಟು ಕಡಿಮೆಯಾಗುತ್ತದೆ ಎಂದು ಹೇಳುವ ಮೂಲಕ ರಸ್ತೆ ಸುರಕ್ಷತೆಯ ಉಪಕ್ರಮಗಳಿಗೆ ಕೊಡುಗೆ ನೀಡುವಂತೆ ಆಟೋಮೊಬೈಲ್ ಕಂಪನಿಗಳನ್ನು ಒತ್ತಾಯಿಸಿದರು.
ಹತ್ತು ವರ್ಷಗಳ ಹಿಂದೆ ನಾನು ಎಲೆಕ್ಟ್ರಿಕ್ ವಾಹನಗಳಿಗೆ ಒತ್ತಾಯಿಸುತ್ತಿದ್ದಾಗ ಭಾರತದ ಆಟೋಮೊಬೈಲ್ ದೈತ್ಯರು ನನ್ನನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಕಂಪನಿ ಈ ಅವಕಾಶವನ್ನು ಕಳೆದುಕೊಂಡಿರುವುದು ಈಗ ಮನವರಿಕೆಯಾಗಿದೆಯಾ ಎಂದು ಕೇಂದ್ರ ಭೂ ಹೆದ್ದಾರಿ ಮತ್ತು ಸಾರಿಗೆ ನಿತಿನ್ ಗಡ್ಕರಿ ತಿಳಿಸಿದರು.
ಸಬ್ಸಿಡಿ ಮತ್ತು ಉತ್ತೇಜನದ ವಿರೋಧಿ ನಾನಲ್ಲ:ಎಲೆಕ್ಟ್ರಿಕ್ ವಾಹನಗಳಿಗೆ ಯಾವುದೇ ಹೆಚ್ಚುವರಿ ಸಬ್ಸಿಡಿ ಅಥವಾ ಉತ್ತೇಜನಕ್ಕೆ ನಾನು ವಿರೋಧಿಯಲ್ಲ. ಹಣಕಾಸು ಸಚಿವಾಲಯ ಮತ್ತು ಭಾರೀ ಕೈಗಾರಿಕೆಗಳ ಸಚಿವಾಲಯವು ಹೆಚ್ಚಿನ ಇವಿ ಸಬ್ಸಿಡಿಗಳನ್ನು ನೀಡಲು ಬಯಸಿದರೆ ತನಗೆ ಯಾವುದೇ ತೊಂದರೆ ಇಲ್ಲ ಎಂದು ಸಚಿವರು ಒತ್ತಿ ಹೇಳಿದರು.
ಹೊಸ ಎಲೆಕ್ಟ್ರಿಕ್ ವಾಹನಗಳ (ಇವಿ) ಉತ್ಪಾದನಾ ನೀತಿಯು ಜಾಗತಿಕ ಮಾರಾಟಗಾರರನ್ನು ಭಾರತಕ್ಕೆ ಆಕರ್ಷಿಸುವ ಗುರಿ ಹೊಂದಿದೆ. ಆದರೆ, ದೇಶೀಯ ಮೌಲ್ಯವರ್ಧನೆಗೆ ಒತ್ತು ನೀಡುತ್ತದೆ ಎಂದರು.