ಬೆಳಗಾವಿ: ಸಾಲ ಮರುಪಾವತಿಸದ ಹಿನ್ನೆಲೆಯಲ್ಲಿ ಒಂದು ತಿಂಗಳ ಹಸುಗೂಸು, ಬಾಣಂತಿ ಸೇರಿ ಮನೆಯವರನ್ನೆಲ್ಲಾ ಹೊರಗೆ ಹಾಕಿ ಮೈಕ್ರೋ ಫೈನಾನ್ಸ್ ಸಂಸ್ಥೆಯೊಂದು ಮನೆ ಜಪ್ತಿ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ
ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗಣಪತಿ ರಾಮಚಂದ್ರ ಲೋಹಾರ್ ಎಂಬುವರ ಮನೆ ಜಪ್ತಿ ಪಡಿಸಿಕೊಳ್ಳಲಾಗಿದೆ. ಬಾಣಂತಿ, ಹಸುಗೂಸು ಅಂತಾನೂ ನೋಡದೇ ಪಾತ್ರೆ, ಬಟ್ಟೆಗಳನ್ನು ಹೊರಗೆ ಹಾಕಿ ಮನೆಗೆ ಬೀಗ ಹಾಕಿದ್ದಾರೆಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.
ಕಳೆದ 6 ತಿಂಗಳಿಂದ ಕಂತು ತುಂಬದ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದಂತೆ ನಿನ್ನೆ ಪೊಲೀಸರು ಹಾಗೂ ವಕೀಲರ ಸಮ್ಮುಖದಲ್ಲೇ ಮನೆಯನ್ನು ಫೈನಾನ್ಸ್ ಸಿಬ್ಬಂದಿ ಜಪ್ತಿ ಮಾಡಿಕೊಂಡಿದ್ದಾರೆ.
ಸಚಿವರ ಪ್ರತಿಕ್ರಿಯೆ: ಬಾಣಂತಿಯನ್ನು ಮನೆಯಿಂದ ಹೊರಹಾಕಿ ಮನೆ ಹರಾಜಿಗಿಟ್ಟ ಪ್ರಕರಣ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವ ಸತೀಶ್ ಜಾರಕಿಹೊಳಿ, ಕುಟುಂಬಸ್ಥರು ದೂರು ಕೊಟ್ಟರೆ, ಫೈನಾನ್ಸ್ನವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಕೂಡ ಈ ಬಗ್ಗೆ ಮಾಹಿತಿ ನೀಡಿದ್ದು, ಇಂತಹದ್ದೊಂದು ಘಟನೆ ಆಗಬಾರದಿತ್ತು. ಮಧ್ಯವರ್ತಿಗಳ ಹಾವಳಿಯಿಂದ ಈ ರೀತಿ ಆಗುತ್ತಿದೆ. ಮಧ್ಯವರ್ತಿ ಹಾಗೂ ಮೂರನೇ ವ್ಯಕ್ತಿಗಳಿಂದ ಕಾಟ ಕೊಡುತ್ತಿರುವುದು ನಮ್ಮ ಇಂಟಲಿಜೆನ್ಸ್ ಮೂಲಕ ಮಾಹಿತಿ ಇದೆ. ನಾನು ಈಗಾಗಲೇ ಅಧಿಕಾರಿಗಳಿಗೆ ಹಾಗೂ ಎಸ್ಪಿ ಅವರಿಗೆ ಕ್ರಮಕ್ಕಾಗಿ ಸೂಚನೆ ನೀಡಿದ್ದೇನೆ ಎಂದರು.
ಅಲ್ಲದೇ, ಇನ್ಮುಂದೆ ಈ ರೀತಿಯ ಘಟನೆ ಆಗಬಾರದು. ಇದರ ಬಗ್ಗೆ ಗಮನ ಹರಿಸುತ್ತೇವೆ. ಜಿಲ್ಲೆಯಲ್ಲಿ ಬಹಳಷ್ಟು ಫೈನಾನ್ಸ್ಗಳಿಂದ ಕಿರುಕುಳ ಆಗುತ್ತಿದೆ. ಬೇರೆ ಬೇರೆ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ಗಳು ಕೆಲಸ ಮಾಡುತ್ತಿವೆ. ಯಾವುದೇ ಸಮಸ್ಯೆ ಇಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳ: ಸಿಎಂಗೆ ಮಾಂಗಲ್ಯ ಸರ ಕಳುಹಿಸಿ ನೊಂದ ಮಹಿಳೆಯರಿಂದ ಅಭಿಯಾನ! - MICRO FINANCE TORTURE