ಬೀಜಿಂಗ್: ಚೀನಾದ ಚಾಂಗ್'ಇ-6 ಬಾಹ್ಯಾಕಾಶ ನೌಕೆಯು ಭಾನುವಾರ ಬೆಳಗ್ಗೆ ಚಂದ್ರನ ದೂರದ ಭಾಗದ ಮೇಲೆ ಇಳಿದಿದೆ ಮತ್ತು ಮಾನವ ಇತಿಹಾಸದಲ್ಲಿ ಮೊದಲ ಬಾರಿಗೆ ಈ ಭೂಪ್ರದೇಶದಲ್ಲಿನ ಮಣ್ಣು ಹಾಗೂ ಕಲ್ಲುಗಳ ಮಾದರಿಗಳನ್ನು ಸಂಗ್ರಹಿಸಲಿದೆ ಎಂದು ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ (ಸಿಎನ್ಎಸ್ಎ) ಪ್ರಕಟಿಸಿದೆ.
ಕ್ವೆಕಿಯಾವೊ -2 ರಿಲೇ ಉಪಗ್ರಹದ ಬೆಂಬಲದೊಂದಿಗೆ, ಚಾಂಗ್'ಇ -6 ನೌಕೆಯ ಲ್ಯಾಂಡರ್-ಅಸೆಂಡರ್ ಸಂಯೋಜನೆಯು ದಕ್ಷಿಣ ಧ್ರುವ-ಐಟ್ಕೆನ್ (ಎಸ್ಪಿಎ) ಬೇಸಿನ್ ಪ್ರದೇಶದಲ್ಲಿ ಬೆಳಗ್ಗೆ 6:23 ಕ್ಕೆ (ಬೀಜಿಂಗ್ ಸಮಯ) ಗೊತ್ತುಪಡಿಸಿದ ಲ್ಯಾಂಡಿಂಗ್ ಪ್ರದೇಶದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಗಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಚಾಂಗ್'ಇ-6 ಆರ್ಬಿಟರ್, ರಿಟರ್ನರ್, ಲ್ಯಾಂಡರ್ ಮತ್ತು ಅಸೆಂಡರ್ಗಳನ್ನು ಒಳಗೊಂಡಿದೆ.
ಈ ವರ್ಷದ ಮೇ 3 ರಂದು ಉಡಾವಣೆಯಾದಾಗಿನಿಂದ ಇದು ಭೂಮಿಯಿಂದ ಚಂದ್ರನತ್ತ ಪಯಣ, ಚಂದ್ರನ ಸಮೀಪ ಬ್ರೇಕಿಂಗ್, ಚಂದ್ರನ ಕಕ್ಷೆ ಪ್ರವೇಶಿಸುವಿಕೆ ಮತ್ತು ಇಳಿಯುವಿಕೆಯಂತಹ ವಿವಿಧ ಹಂತಗಳನ್ನು ದಾಟಿದೆ. ಲ್ಯಾಂಡರ್-ಅಸೆಂಡರ್ ಸಂಯೋಜನೆಯು ಮೇ 30 ರಂದು ಆರ್ಬಿಟರ್-ರಿಟರ್ನರ್ ಸಂಯೋಜನೆಯಿಂದ ಬೇರ್ಪಟ್ಟಿದೆ ಎಂದು ಸಿಎನ್ಎಸ್ಎ ತಿಳಿಸಿದೆ.
ಲ್ಯಾಂಡರ್-ಅಸೆಂಡರ್ ಸಂಯೋಜನೆಯು ಬೆಳಗ್ಗೆ 6:09 ಕ್ಕೆ ನಿಯಂತ್ರಿತವಾಗಿ ಲ್ಯಾಂಡಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಿತು. ಈ ಸಂದರ್ಭದಲ್ಲಿ ವೇರಿಯೆಬಲ್ ಥ್ರಸ್ಟ್ ಹೊಂದಿರುವ ಮುಖ್ಯ ಎಂಜಿನ್ ಅನ್ನು ಸ್ಟಾರ್ಟ್ ಮಾಡಲಾಯಿತು ಮತ್ತು ಸಂಯೋಜನೆಯು ತ್ವರಿತವಾಗಿ ತನ್ನ ಎತ್ತರವನ್ನು ಸರಿಹೊಂದಿಸಿಕೊಂಡು ಕ್ರಮೇಣ ಚಂದ್ರನ ಮೇಲ್ಮೈಯನ್ನು ಸಮೀಪಿಸಿತು.