ನವದೆಹಲಿ:ಚಂದ್ರನ ಶಿಲೆಗಳ ಮಾದರಿಗಳನ್ನು ಭೂಮಿಗೆ ತರಲು ಭಾರತವು 2027 ರಲ್ಲಿ ಚಂದ್ರಯಾನ -4 ಮಿಷನ್ ಪ್ರಾರಂಭಿಸಲಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಮಿಷನ್ ಬಗ್ಗೆ ಸಚಿವರು ಹೇಳಿದ್ದು ಹೀಗೆ:ಚಂದ್ರಯಾನ -4 ಮಿಷನ್ ಹೆವಿಲಿಫ್ಟ್ ಎಲ್ವಿಎಂ -3 ರಾಕೆಟ್ನ ಕನಿಷ್ಠ ಎರಡು ಪ್ರತ್ಯೇಕ ಉಡಾವಣೆಗಳನ್ನು ಒಳಗೊಂಡಿರುತ್ತದೆ. ಇದು ಮಿಷನ್ನ ಐದು ವಿಭಿನ್ನ ಘಟಕಗಳನ್ನು ಹೊತ್ತೊಯ್ಯಲಿದ್ದು, ಇದನ್ನು ಕಕ್ಷೆಯಲ್ಲಿ ಜೋಡಿಸಲಾಗುವುದು. "ಚಂದ್ರಯಾನ -4 ಮಿಷನ್ ಚಂದ್ರನ ಮೇಲ್ಮೈಯಿಂದ ಮಾದರಿಗಳನ್ನು ಸಂಗ್ರಹಿಸಿ ಅವುಗಳನ್ನು ಭೂಮಿಗೆ ಮರಳಿ ತರುವ ಗುರಿಯನ್ನು ಹೊಂದಿದೆ" ಎಂದು ಸಿಂಗ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ .
ಗಗನಯಾನ ಮಿಷನ್ ಬಗ್ಗೆ ಮಾತನಾಡಿದ ಸಚಿವರು, ವಿಶೇಷವಾಗಿ ವಿನ್ಯಾಸಗೊಳಿಸಲಾದ ಬಾಹ್ಯಾಕಾಶ ನೌಕೆಯಲ್ಲಿ ಭಾರತೀಯ ಗಗನಯಾತ್ರಿಗಳನ್ನು ಭೂಮಿಯ ಕೆಳ ಕಕ್ಷೆಗೆ ಕಳುಹಿಸುವುದು ಮತ್ತು ಅವರನ್ನು ಸುರಕ್ಷಿತವಾಗಿ ಮರಳಿ ಕರೆತರುವುದನ್ನು ಒಳಗೊಂಡಿರುವ ಗಗನಯಾನ ಮಿಷನ್ ಅನ್ನು ಮುಂದಿನ ವರ್ಷ ಪ್ರಾರಂಭಿಸಲಾಗುವುದು ಎಂದು ಹೇಳಿದರು.
2026ರಲ್ಲಿ ಸಮುದ್ರದಾಳದಲ್ಲಿ ಸಂಶೋಧನೆ :2026 ರಲ್ಲಿ ಭಾರತವು ಸಮುದ್ರಯಾನವನ್ನು ಸಹ ಪ್ರಾರಂಭಿಸಲಿದೆ. ಈ ಮಿಷನ್ ಅಡಿಯಲ್ಲಿ ಸಮುದ್ರದ ತಳವನ್ನು ಅನ್ವೇಷಿಸಲು ಜಲಾಂತರ್ಗಾಮಿ ನೌಕೆಯಲ್ಲಿ ಮೂವರು ವಿಜ್ಞಾನಿಗಳು ಆಳವಾದ ಸಮುದ್ರದಲ್ಲಿ 6,000 ಮೀಟರ್ ಆಳದವರೆಗೆ ಪ್ರಯಾಣಿಸಲಿದ್ದಾರೆ.