ನವದೆಹಲಿ : ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಬುಧವಾರ ಹೈದರಾಬಾದ್ನಲ್ಲಿರುವ ಕಂಪನಿಯ ಇಂಡಿಯಾ ಡೆವಲಪ್ ಮೆಂಟ್ ಸೆಂಟರ್ (ಐಡಿಸಿ) ಗೆ ಭೇಟಿ ನೀಡಿದರು. 1998 ರಲ್ಲಿ ಬಿಲ್ ಗೇಟ್ಸ್ ಸ್ವತಃ ಈ ಸಂಶೋಧನಾ ಕೇಂದ್ರವನ್ನು ಆರಂಭಿಸಿದ್ದರು. ಐಡಿಸಿ ತನ್ನ ಉತ್ತಮ ಸಂಶೋಧನೆ, ಎಂಜಿನಿಯರಿಂಗ್ ಮತ್ತು ಅಭಿವೃದ್ಧಿಯ 25 ನೇ ವರ್ಷವನ್ನು ಆಚರಿಸುತ್ತಿದೆ. ಈ ಸಂಶೋಧನಾ ಕೇಂದ್ರವು ಅಜೂರ್, ವಿಂಡೋಸ್, ಆಫೀಸ್, ಬಿಂಗ್, ಕೋಪೈಲಟ್ ಮತ್ತು ಇತರ ಎಐ ಅಪ್ಲಿಕೇಶನ್ಗಳಂಥ ವಿಶ್ವ ದರ್ಜೆಯ ಉತ್ಪನ್ನಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ಬಿಲ್ ಗೇಟ್ಸ್ ಭೇಟಿಯ ಬಗ್ಗೆ ಮಾತನಾಡಿದ ಮೈಕ್ರೋಸಾಫ್ಟ್ ಐಡಿಸಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಎಕ್ಸ್ಪೀರಿಯನ್ಸ್ + ಡಿವೈಸಸ್ ಇಂಡಿಯಾದ ಸಿವಿಪಿ ರಾಜೀವ್ ಕುಮಾರ್, "ಬಿಲ್ ನಮ್ಮ ಅತಿದೊಡ್ಡ ಸಂಶೋಧನಾ ಕೇಂದ್ರವಾದ ಐಡಿಸಿಯಲ್ಲಿ ಭಾರತದ ಅತ್ಯಂತ ಪ್ರತಿಭಾವಂತ ಎಂಜಿನಿಯರುಗಳನ್ನು ಉದ್ದೇಶಿಸಿ ಮಾತನಾಡುವುದನ್ನು ನೋಡುವುದು ರೋಮಾಂಚಕಾರಿಯಾಗಿದೆ" ಎಂದು ತಿಳಿಸಿದ್ದಾರೆ.
ಈ ವಾರದ ಆರಂಭದಲ್ಲಿ ತಾವು ಭಾರತಕ್ಕೆ ಭೇಟಿ ನೀಡುವ ವಿಷಯವನ್ನು ಗೇಟ್ಸ್ ಲಿಂಕ್ಡ್ಇನ್ ಪೋಸ್ಟ್ನಲ್ಲಿ ತಿಳಿಸಿದ್ದರು. "ಶತಕೋಟಿ ಜನರ ಜೀವನವನ್ನು ಸುಧಾರಿಸಲು ಆರೋಗ್ಯ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ಹವಾಮಾನ ಸುಧಾರಣೆಗೆ ಭಾರತವು ಹೇಗೆ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದೆ ಎಂಬುದರ ಬಗ್ಗೆ ತಿಳಿಯಲು ನಾನು ಉತ್ಸುಕನಾಗಿದ್ದೇನೆ" ಎಂದು ಗೇಟ್ಸ್ ಲಿಂಕ್ಡ್ಇನ್ ಪೋಸ್ಟ್ನಲ್ಲಿ ತಿಳಿಸಿದ್ದರು.