ವಡೋದರಾ: ದೇಶಿ ಏಕದಿನ ಕ್ರಿಕೆಟ್ನ ಪ್ರತಿಷ್ಠಿತ ವಿಜಯ್ ಹಜಾರೆ ಟ್ರೋಫಿಯನ್ನು ಕರ್ನಾಟಕ ಐದನೇ ಬಾರಿ ಗೆದ್ದುಕೊಂಡಿತು. ವಡೋದರಾದಲ್ಲಿ ಶನಿವಾರ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಮಯಾಂಕ್ ಅಗರವಾಲ್ ನಾಯಕತ್ವದ ಕರ್ನಾಟಕ ತಂಡವು 36 ರನ್ಗಳಿಂದ ಕರುಣ್ ನಾಯರ್ ನಾಯಕತ್ವದ ವಿದರ್ಭ ತಂಡದ ಮೇಲೆ ಭರ್ಜರಿ ಜಯಭೇರಿ ಬಾರಿಸಿತು. ಈ ಮೂಲಕ ಐದು ವರ್ಷದ ಬಳಿಕ ರಾಜ್ಯ ತಂಡವು ದೇಶಿ ಏಕದಿನ ಕ್ರಿಕೆಟ್ನ ಚಾಂಪಿಯನ್ ಪಟ್ಟ ಅಲಂಕರಿಸಿತು.
ವಡೋದರಾದ ಕೋತಂಬಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ವಿದರ್ಭ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇದರಿಂದಾಗಿ ಕರ್ನಾಟಕ ತಂಡ ಮೊದಲು ಬ್ಯಾಟಿಂಗ್ ಅವಕಾಶ ಪಡೆಯಿತು. ಮಯಾಂಕ್ ಬಳಗ ಉತ್ತಮ ಆರಂಭ ಪಡೆಯದಿದ್ದರೂ ಮಧ್ಯಮ ಕ್ರಮಾಂಕದಲ್ಲಿ ಅಬ್ಬರಿಸಿತು.
ಆರಂಭಿಕರಾಗಿ ಆಗಮಿಸಿದ್ದ ಮಯಾಂಕ್ (32 ರನ್), ಪಡಿಕಲ್ (8 ರನ್), ಅನೀಶ್ (21) ರನ್ ಗಳಿಸಿ ಪೆವಿಲಿಯನ್ ಸೇರಿದರು. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದ ಸ್ಮರಣ್ ರವಿಚಂದ್ರನ್ ಅಮೋಘ ಶತಕ (101 ರನ್), ಕೃಷ್ಣನ್ ಶ್ರೀಜಿತ್ (78 ರನ್) ಮತ್ತು ಅಭಿನವ್ ಮನೋಹರ್ (79 ರನ್, 42 ಎಸೆತ) ಬಿರುಸಿನ ಆಟದ ನೆರವಿನಿಂದ ತಂಡ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 348 ರನ್ ಗಳಿಸಿತು.
ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಅಜೇಯವಾಗಿ ಫೈನಲ್ಗೆ ಬಂದಿದ್ದ ವಿದರ್ಭ ತಂಡವು ಕೊನೆಯಲ್ಲಿ ಹೋರಾಟ ತೋರಿದರೂ 48.2 ಓವರ್ಗಳಲ್ಲಿ 312 ರನ್ಗಳಿಸಿ ಕರ್ನಾಟಕ ತಂಡಕ್ಕ ಶರಣಾಯಿತು.
ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿದ್ದ ವಿದರ್ಭ ತಂಡಕ್ಕೆ ಈ ಮೊತ್ತ ಅಸಾಧ್ಯವಾಗಿರಲಿಲ್ಲ. ನಾಯಕ ಕರುಣ್ ನಾಯರ್, ಧ್ರುವ ಶೋರೆ ಮತ್ತು ಯಶ್ ರಾಠೋಡ್ ಟೂರ್ನಿಯಲ್ಲಿ ರನ್ ಹೊಳೆ ಹರಿಸಿದ್ದರು. ಆದರೆ ಫೈನಲ್ ಪಂದ್ಯದಲ್ಲಿ ಧ್ರುವ ಶೋರೆ (110) ಮಾತ್ರ ಅಬ್ಬರಿಸಿದರು.
ಯಶ್ ರಾಠೋಡ್ (22) ಮತ್ತು ಕರುಣ್ ನಾಯರ್ (27 ರನ್) ಬೇಗ ಪೆವಿಲಿಯನ್ ಸೇರಿದರು. ಇನ್ನು ಕೊನೆಯಲ್ಲಿ ಹರ್ಷ ದುಬೆ 30 ಎಸೆತಗಳಲ್ಲಿ 63 ರನ್ ಬಾರಿಸಿ ಜಯದ ಆಸೆ ಮೂಡಿಸಿದರೂ, ಗೆಲುವಿನ ದಡ ತಲುಪಲಾಗಲಿಲ್ಲ. 48.2 ಓವರ್ಗಳಲ್ಲಿ 312 ರನ್ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ವಿದರ್ಭ ಸೋಲನುಭವಿಸಿತು. ಈ ಮೂಲಕ ಚೊಚ್ಚಲ ಟ್ರೋಫಿ ಗೆಲ್ಲುವ ಕನಸು ನನಸಾಗಲಿಲ್ಲ.
ಕರ್ನಾಟಕ ಪರ ವಾಸುಕಿ ಕೌಶಿಕ್, ಪ್ರಸಿದ್ಧ ಕೃಷ್ಣ, ಅಭಿಲಾಶ್ ಶೆಟ್ಟಿ ತಲಾ 3 ವಿಕೆಟ್ ಕಬಳಿಸಿ, ಎದುರಾಳಿ ತಂಡವನ್ನು ಕಟ್ಟಿಹಾಕಿದರು.
ಸ್ಕೋರ್ ವಿವರ:
ಕರ್ನಾಟಕ: 348/8 (50 ಓವರ್)
ವಿದರ್ಭ: 312 (48.2 ಓವರ್)
ಇದನ್ನೂ ಓದಿ: ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಬಲಿಷ್ಠ ಭಾರತ ಪ್ರಕಟ: ತಂಡದಲ್ಲಿ ಏಕೈಕ ಕನ್ನಡಿಗ!
ಇದನ್ನೂ ಓದ: ಒಂದೇ ಒಂದು ತಪ್ಪಿನಿಂದ ಚಾಂಪಿಯನ್ಸ್ ಟ್ರೋಫಿಯಿಂದಲೇ ಹೊರಬಿದ್ದ ವಿಕೆಟ್ ಕೀಪರ್!