ಥಾಣೆ (ಮಹಾರಾಷ್ಟ್ರ): ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಥಾಣೆಯಲ್ಲಿ ಪ್ರಮುಖ ಆರೋಪಿಯನ್ನ ಬಂಧಿಸಿದ್ದಾರೆ. ಮೊಹಮ್ಮದ್ ಸಜ್ಜದ್ ಅಲಿಯಾಸ್ ವಿಜಯ್ ದಾಸ್ ಬಂಧಿತ ಆರೋಪಿ.
ಮೊಬೈಲ್ ಟವರ್ ಲೊಕೇಶನ್ ಸಹಾಯದಿಂದ ಪೊಲೀಸರು ಆರೋಪಿಯನ್ನ ಪತ್ತೆ ಹಚ್ಚಿದ್ದಾರೆ. ಆರೋಪಿ ಮೊಹಮ್ಮದ್ ಸಜ್ಜದ್ ಅಲಿಯಾಸ್ ವಿಜಯ್ ದಾಸ್ ಮೊಬೈಲ್ ಟವರ್ ಲೊಕೇಶನ್ ವಡವ್ಲಿ ಪೊಲೀಸ್ ಠಾಣೆ ವ್ಯಾಪ್ತಿಯ ಹಿರಾನಂದನಿ ಎಸ್ಟೇಟ್‌ನಲ್ಲಿ ಪತ್ತೆಯಾಗಿತ್ತು. ವಿಜಯ್ ದಾಸ್ ಕೆಲವು ವರ್ಷಗಳಿಂದ ಹಿರಾನಂದಾನಿ ಪ್ರದೇಶದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿ ಆರೋಪಿಯನ್ನ ಹಿರನಂದಾನಿ ಕಾರ್ಮಿಕರ ಕ್ಯಾಂಪ್ ಬಳಿ ಬಂಧಿಸಿದ್ದಾರೆ ಎಂದು ಹಿರಿಯ ಮುಂಬೈ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಘಟನೆ ವಿವರ : ಗುರುವಾರ ನಸುಕಿನ ಜಾವ ಮುಂಬೈನ ಬಾಂದ್ರಾದಲ್ಲಿರುವ ಬಾಲಿವುಡ್ ಸೂಪರ್ ಸ್ಟಾರ್ ಸೈಫ್ ಅಲಿ ಖಾನ್ ಅವರ ಮನೆಗೆ ನುಗ್ಗಿದ ದುಷ್ಕರ್ಮಿ, ಚಾಕುವಿನಿಂದ ಇರಿದು ಪರಾರಿಯಾಗಿದ್ದ. ನಟನಿಗೆ ಚಾಕುವಿನಿಂದ 6 ಬಾರಿ ಇರಿದಿದ್ದ. ಇದರಿಂದಾಗಿ ಸೈಫ್ ಅಲಿ ಖಾನ್ ಅವರ ಬೆನ್ನುಮೂಳೆ ಮತ್ತು ಕುತ್ತಿಗೆಯ ಬಳಿ ಗಂಭೀರ ಗಾಯಗಳಾಗಿದ್ದವು. ನಂತರ ಅವರನ್ನು ಆಟೋರಿಕ್ಷಾದಲ್ಲಿ ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ವೈದ್ಯರು ಐದು ಗಂಟೆಗಳ ತುರ್ತು ಶಸ್ತ್ರಚಿಕಿತ್ಸೆ ನಡೆಸಿ ನಟನ ಬೆನ್ನುಮೂಳೆಯಿಂದ 2.5 ಇಂಚಿನ ಬ್ಲೇಡ್ ತುಂಡನ್ನು ಹೊರ ತೆಗೆದಿದ್ದರು. ಇದೀಗ ನಟ ಚೇತರಿಸಿಕೊಳ್ಳುತ್ತಿದ್ದಾರೆ. ಜನವರಿ 21ರೊಳಗೆ ಅವರನ್ನು ಡಿಸ್ಚಾರ್ಜ್ ಮಾಡುವ ನಿರೀಕ್ಷೆಯಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ದಾಳಿ ಮಾಡಿದ ವ್ಯಕ್ತಿ ಮನೆಯಿಂದ ಕಳ್ಳತನ ಮಾಡುವ ಉದ್ದೇಶ ಹೊಂದಿರುವಂತೆ ತೋರಲಿಲ್ಲ. ಮಗನನ್ನು ರಕ್ಷಿಸಲು ಸೈಫ್ ಮುಂದಾದಾಗ ದಾಳಿಕೋರ ನಿರಂತರವಾಗಿ ದಾಳಿ ಮಾಡಿದ್ದಾನೆ. ಮನೆಯೊಳಗೆ ನುಗ್ಗಿದ ಆ ವ್ಯಕ್ತಿ ಬಹಳ ಆಕ್ರಮಣಕಾರಿಯಾಗಿದ್ದನಾದರೂ, ಆಭರಣಗಳು ಸೇರಿದಂತೆ ತಮ್ಮ ಮನೆಯಲ್ಲಿ ಯಾವುದೇ ವಸ್ತುಗಳು ಕಳುವಾಗಿಲ್ಲ ಎಂದು ಸೈಫ್ ಪತ್ನಿ ಕರೀನಾ ಪೊಲೀಸರಿಗೆ ತಿಳಿಸಿದ್ದಾರೆ.
ಬಾಲಿವುಡ್ ನಟನ ಮೇಲೆ ದಾಳಿ ನಡೆಸಿದ ಪ್ರಕರಣ ಬೇಧಿಸಲು ಪೊಲೀಸರು 30ಕ್ಕೂ ಹೆಚ್ಚು ತಂಡಗಳನ್ನು ರಚಿಸಿ, ಶೋಧ ಕಾರ್ಯಾಚರಣೆ ಇಳಿದಿದ್ದಾರೆ.
ಇದನ್ನೂ ಓದಿ : ಸೈಫ್ ಅಲಿ ಖಾನ್ ಮೇಲೆ ಚಾಕು ಇರಿತ: ಛತ್ತೀಸ್‌ಗಢದಲ್ಲಿ ಆರೋಪಿ ವಶಕ್ಕೆ! - SAIF CASE SUSPECT DETAINED