ಇತ್ತೀಚೆಗೆ ಸಾಮಾಜಿಕ ಜಾಲತಾಣದ ಮೂಲಕ ಮಕ್ಕಳು ಮಾನಸಿಕ ಖಿನ್ನತೆ ಸೇರಿದಂತೆ ಅನೇಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರನ್ನು ರಕ್ಷಿಸುವ ಉದ್ದೇಶದಿಂದ ಆಸ್ಟ್ರೇಲಿಯಾ ಸರ್ಕಾರ ಹೊಸ ಕಾನೂನು ಜಾರಿಗೆ ತರಲು ಮುಂದಾಗಿದೆ.
ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಮಾತನಾಡಿ, 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಲು ಕಾನೂನು ರೂಪಿಸುತ್ತೇವೆ ಎಂದು ಹೇಳಿದ್ದಾರೆ. ಇದಕ್ಕಾಗಿ ಏಜ್ ವೆರಿಫಿಕೇಷನ್ ಸಿಸ್ಟಮ್ ಅನ್ನು ಪ್ರಯೋಗಿಸಲಾಗುತ್ತಿದೆ. ಮುಂದಿನ ವರ್ಷಾಂತ್ಯದೊಳಗೆ ಕಾನೂನು ಜಾರಿಗೆ ಬರುವ ಸಾಧ್ಯತೆ ಇದೆ.
ಸಾಮಾಜಿಕ ಮಾಧ್ಯಮ ನಮ್ಮ ಮಕ್ಕಳಿಗೆ ಹಾನಿ ಮಾಡುತ್ತಿದೆ. ಇದರ ಅತಿಯಾದ ಬಳಕೆಯಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದೆ. ನಿರ್ದಿಷ್ಟವಾಗಿ ಹೆಣ್ಣು ಮಕ್ಕಳಿಗೆ ಅಶ್ಲೀಲ ವಿಚಾರಗಳು ಅಪಾಯ ಉಂಟುಮಾಡುತ್ತಿವೆ. ಸ್ತ್ರೀ ದ್ವೇಷದ ವಿಷಯಗಳು ಹುಡುಗರನ್ನು ಗುರಿಯಾಗಿಸುತ್ತಿವೆ. ಹೀಗಾಗಿ, ಈ ವರ್ಷ ಸಂಸತ್ತಿನಲ್ಲಿ ಕಾನೂನನ್ನು ಪರಿಚಯಿಸಲಾಗುವುದು. ಜನಪ್ರತಿನಿಧಿಗಳು ಅಂಗೀಕರಿಸಿದ 12 ತಿಂಗಳ ನಂತರ ಕಾನೂನು ಜಾರಿಗೆ ಬರಲಿವೆ ಎಂದು ಅಲ್ಬನೀಸ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.