ನವದೆಹಲಿ: ಭಾರತದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಅಥವಾ ಯಂತ್ರ ಕಲಿಕೆ (ಮಶೀನ್ ಲರ್ನಿಂಗ್- ಎಂಎಲ್) ಉದ್ಯೋಗಗಳ ನೇಮಕಾತಿಯು ಹೆಚ್ಚಾಗುತ್ತಲೇ ಇದ್ದು, ಹಿಂದಿನ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಮಾರ್ಚ್ನಲ್ಲಿ ಈ ವಲಯದಲ್ಲಿ ಹೊಸ ಉದ್ಯೋಗಗಳ ಸಂಖ್ಯೆ ಶೇಕಡಾ 12 ರಷ್ಟು ಹೆಚ್ಚಳವಾಗಿದೆ ಎಂದು ಹೊಸ ವರದಿಯೊಂದು ಸೋಮವಾರ ತಿಳಿಸಿದೆ.
ನೌಕರಿ ಜಾಬ್ ಸ್ಪೀಕ್ ಸೂಚ್ಯಂಕದ ಪ್ರಕಾರ, ಮಶೀನ್ ಲರ್ನಿಂಗ್ ಎಂಜಿನಿಯರ್ ಹುದ್ದೆಗಳ ನೇಮಕಾತಿಯು ಮಾರ್ಚ್ 2024 ರಲ್ಲಿ ಶೇಕಡಾ 82 ರಷ್ಟು ಏರಿಕೆಯಾಗಿದೆ. ಫುಲ್ ಸ್ಟ್ಯಾಕ್ ಡೇಟಾ ಸೈಂಟಿಸ್ಟ್ ಹುದ್ದೆಗಳ ನೇಮಕಾತಿಯು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 20 ರಷ್ಟು ಬೆಳವಣಿಗೆ ದಾಖಲಿಸಿದೆ.
ಇದಲ್ಲದೇ ಕಳೆದ ವರ್ಷಕ್ಕೆ ಹೋಲಿಸಿದರೆ ಮಾರ್ಚ್ 2024 ರಲ್ಲಿ ತೈಲ ಮತ್ತು ಅನಿಲ ವಲಯದಲ್ಲಿ ನೇಮಕಾತಿ ಶೇಕಡಾ 22 ರಷ್ಟು ಹೆಚ್ಚಾಗಿದೆ. ಈ ವಲಯದಲ್ಲಿ ಎಂಇಪಿ ಎಂಜಿನಿಯರ್ಗಳು ಮತ್ತು ಎಲೆಕ್ಟ್ರಿಕಲ್ ಎಂಜಿನಿಯರ್ಗಳಿಗೆ ಗರಿಷ್ಠ ಬೇಡಿಕೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಹಮದಾಬಾದ್ ಮತ್ತು ಹೈದರಾಬಾದ್ ನಗರಗಳಲ್ಲಿ ಈ ವಲಯದಲ್ಲಿ ನೇಮಕಾತಿ ವಿಶೇಷವಾಗಿ ಹೆಚ್ಚಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಫಾರ್ಮಾ ವಲಯದಲ್ಲಿ ನೇಮಕಾತಿ ಶೇಕಡಾ 2 ರಷ್ಟು ಬೆಳವಣಿಗೆಯಾಗಿದೆ.