ಬೆಳಗಾವಿ: ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ "ಭರತ ಹುಣ್ಣಿಮೆ" ನಿಮಿತ್ತ ಅದ್ಧೂರಿ ಜಾತ್ರೆ ನೆರವೇರುತ್ತಿದೆ. ಉತ್ತರ ಕರ್ನಾಟಕದ ಶಕ್ತಿದೇವತೆ ರೇಣುಕಾದೇವಿ ದರ್ಶನಕ್ಕೆ ಜನಸಾಗರವೇ ಹರಿದು ಬಂದಿದ್ದು, ಉಧೋ... ಉಧೋ... ಯಲ್ಲಮ್ಮ ನಿನ್ಹಾಲ್ಕ ಉಧೋ..ಘೋಷವಾಕ್ಯ ಲಕ್ಷ ಲಕ್ಷ ಭಕ್ತರಿಂದ ಮೊಳಗಿತು.
ಏಳುಕೊಳ್ಳದ ನಾಡು ಯಲ್ಲಮ್ಮನ ಗುಡ್ಡ ಬುಧವಾರ ಅಕ್ಷರಶಃ ಜನಜಾತ್ರೆಯ ಸ್ವರೂಪ ಪಡೆದಿತ್ತು. ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಕಣ್ಣು ಹಾಯಿಸಿದಲ್ಲೆಲ್ಲ ಜನವೋ ಜನ. ಚಕ್ಕಡಿ, ಟ್ರ್ಯಾಕ್ಟರ್ಗಳ ಸಾಲು, ಜೋಗತಿಯರ ಚೌಡಕಿ ಹಾಡು - ಕುಣಿತ, ಭರತ ಹುಣ್ಣಿಮೆ ಜಾತ್ರೆಯ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು.
ಮಲಪ್ರಭೆ ದಡದಲ್ಲಿರುವ ಜೋಗುಳಬಾವಿ ಹಾಗೂ ಎಣ್ಣೆ ಹೊಂಡದಲ್ಲಿ ಪವಿತ್ರ ಸ್ನಾನ ಮಾಡಿದ ಭಕ್ತರು, ಹೊಸ ಬಟ್ಟೆ ಧರಿಸಿ ಯಲ್ಲಮ್ಮ ದೇವಸ್ಥಾನಕ್ಕೆ ಆಗಮಿಸಿದ್ದರು. ಸರತಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದು ಪುನೀತರಾದರು. ಇನ್ನು ರಸ್ತೆ ಬದಿಗಳಲ್ಲೇ ಕಡಬು, ಹೋಳಿಗೆ, ವಡೆ, ಕರ್ಚಿಕಾಯಿ ಸೇರಿದಂತೆ ತರಹೇವಾರಿ ತಿಂಡಿಗಳನ್ನು ಇಟ್ಟು ಹಡ್ಡಲಗಿ (ಪರಡಿ) ತುಂಬಿ ತಮ್ಮ ಇಷ್ಟಾರ್ಥಗಳನ್ನು ಪೂರೈಸಿದ ದೇವಿಗೆ ನೈವೇದ್ಯ ಅರ್ಪಿಸಿ ಕೃತಾರ್ಥರಾದರು.
ಕರ್ನಾಟಕ ಅಲ್ಲದೇ ಪಕ್ಕದ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ ಸೇರಿ ಮತ್ತಿತರ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಗುಡ್ಡಕ್ಕೆ ಬಂದಿದ್ದರು. ಬೆಳಗಿನ ಜಾವದಿಂದಲೇ ದೇವಿ ದರ್ಶನ ಆರಂಭವಾಗಿತ್ತು. ಭಕ್ತರು ಯಲ್ಲಮ್ಮ ತಾಯಿಗೆ ಜೈಕಾರ ಕೂಗಿ, ದೇವಸ್ಥಾನಕ್ಕೆ ಭಂಡಾರ ಹಾರಿಸಿ ಸಂಭ್ರಮಿಸುವುದು ಸಾಮಾನ್ಯವಾಗಿತ್ತು. ಭಕ್ತರು ಭಂಡಾರದಲ್ಲಿ ಮಿಂದೆದ್ದಿದ್ದು ಭಕ್ತಿಯ ಹೊಳೆ ಹರಿಸಿದರು. ಇನ್ನು ಬಳೆ, ಅರಿಶಿಣ - ಕುಂಕುಮ, ಆಟಿಕೆ ಸಾಮಾನುಗಳ ವ್ಯಾಪಾರವೂ ಜೋರಾಗಿತ್ತು.
ಚಕ್ಕಡಿ, ಟ್ರ್ಯಾಕ್ಟರ್ ಗಳಲ್ಲಿ ಬಂದ ಭಕ್ತರು: ಆಧುನಿಕತೆ ಎಷ್ಟೇ ಮುಂದುವರಿದರೂ ದೇವಿ ದರ್ಶನಕ್ಕೆ ಸಾಂಪ್ರದಾಯಿಕವಾಗಿ ಚಕ್ಕಡಿಯಲ್ಲಿ ಬರುವುದನ್ನು ಮಾತ್ರ ಭಕ್ತರು ನಿಲ್ಲಿಸಿಲ್ಲ. ಕುಟುಂಬ ಸಮೇತ ಆಗಮಿಸಿ ಅಲ್ಲಿಯೇ ವಸತಿ ಇದ್ದು, ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಮತ್ತೊಂದಿಷ್ಟು ಭಕ್ತರು ಟ್ರ್ಯಾಕ್ಟರ್ ಸೇರಿ ಬೇರೆ ಬೇರೆ ವಾಹನಗಳು ಹಾಗೂ ಕಾಲ್ನಡಿಗೆ ಮೂಲಕವೂ ಗುಡ್ಡಕ್ಕೆ ಹರಿದು ಬಂದಿದೆ.
ರಾಯಚೂರಿನಿಂದ ಆಗಮಿಸಿದ್ದ ಭಕ್ತೆ ರೇಷ್ಮಾ ಮಾತನಾಡಿ, "ಐದಾರು ವರ್ಷಗಳಿಂದ ಯಲ್ಲಮ್ಮನ ಗುಡ್ಡಕ್ಕೆ ಬರುತ್ತಿದ್ದೇವೆ. ಇಂದು ಬೆಳಗ್ಗೆ 10 ಗಂಟೆಗೆ ಸಾಲಿನಲ್ಲಿ ನಿಂತಿದ್ದೆವು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರಿಂದ ಮಧ್ಯಾಹ್ನ ಬಳಿಕ ದೇವಿಯ ದರ್ಶನ ಸಿಕ್ಕಿತು. ಪೊಲೀಸರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ಕರ್ನಾಟಕ ಸರ್ಕಾರ ಸ್ವಚ್ಛತೆ ಸೇರಿ ಮತ್ತಷ್ಟು ಗುಣಮಟ್ಟದ ಸೇವೆ ಕಲ್ಪಿಸುವ ಕೆಲಸ ಮಾಡಬೇಕಿದೆ" ಎಂದರು.
ಜಿಲ್ಲಾಡಳಿತದಿಂದ ಸಕಲ ವ್ಯವಸ್ಥೆ: ಯಲ್ಲಮ್ಮದೇವಿ ದೇವಸ್ಥಾನದಲ್ಲಿ ವ್ಯವಸ್ಥೆ ಪರಿಶೀಲಿಸಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, "ದೇವಿ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಪ್ರಾಧಿಕಾರದ ವತಿಯಂದ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿದೆ. ಒಂದೇ ದಿನದಲ್ಲಿ ಸರಿಸುಮಾರು 10 ಲಕ್ಷ ಜನರು ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ. ಭಕ್ತಾದಿಗಳಿಗೆ ತೊಂದರೆಯಾಗದಂತೆ ಪ್ರವೇಶ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ರಸ್ತೆಗಳನ್ನು ಮಾರ್ಪಡಿಸಿ ಸಂಚಾರ ದಟ್ಟಣೆ ನಿಯಂತ್ರಿಸುತ್ತಿದ್ದೇವೆ" ಎಂದರು.
"ಚಕ್ಕಡಿ ಗಾಡಿ, ಜೀಪ್, ಟೆಂಪೋ, ಟ್ರ್ಯಾಕ್ಟರ್, ಬೈಕ್, ಕಾರ್, ಬಸ್ ಸೇರಿದಂತೆ ಎಲ್ಲ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಸರಿಸುಮಾರು 1,500 ಪೊಲೀಸ್ ಹಾಗೂ ಗೃಹರಕ್ಷಕ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಪ್ರವಾಸೋದ್ಯಮ ಸಚಿವರು, ಪ್ರವಾಸೋದ್ಯಮ ಮಂಡಳಿ ಅಧ್ಯಕರು, ಈ ಭಾಗದ ಶಾಸಕರ ಸಲಹೆಯಂತೆ ವಿವಿಧ ಭಾಗಗಳಿಂದ ಆಗಮಿಸುವ ಸಾರ್ವಜನಿಕರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದಲ್ಲದೇ ಮೊದಲ ಬಾರಿಗೆ ಮಂಡಳಿ ಹಾಗೂ ಪ್ರಾಧಿಕಾರದ ವತಿಯಿಂದ ಭಕ್ತಾಧಿಗಳಿಗಾಗಿ 3 ಲಕ್ಷ ಪಾಕೇಟ್ ಮಜ್ಜಿಗೆ ದಾಸೋಹ ಮಾಡಲಾಗಿದೆ. ಮುಂದಿನ ವರ್ಷದಲ್ಲಿ ದಾಸೋಹ ಭವನ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ತಿರುಪತಿ, ಧರ್ಮಸ್ಥಳದ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಈಗಾಗಲೇ ಅನುದಾನ ಲಭ್ಯವಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು" ಎಂದು ಮೊಹಮ್ಮದ್ ರೋಷನ್ ತಿಳಿಸಿದರು.
ಮೂಲ ಸೌಕರ್ಯ ಕಲ್ಪಿಸಲಾಗಿದೆ: "ದನಕರುಗಳಿಗೆ ಮೇವು ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಪಾರ್ಕಿಂಗ್ ಮತ್ತು ಟ್ರಾಫಿಕ್ ಮೂಲ ಸಮಸ್ಯೆಯಾಗಿತ್ತು. ಚಕ್ಕಡಿ ಗಾಡಿ ಹಾಗೂ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ಮಾಡಲಾಗಿದೆ. ಗುಣಮಟ್ಟದ ವ್ಯವಸ್ಥೆ ಕಲ್ಪಿಸಲು ಪ್ರಾಧಿಕಾರ ಹಾಗೂ ಪ್ರವಾಸೋದ್ಯಮ ಮಂಡಳಿಯಿಂದ ಯೋಜನೆ ಸಿದ್ಧಗೊಳ್ಳುತ್ತಿದೆ. ಜೋಗುಳಬಾವಿ, ಉಗರಗೋಳ ಹಾಗೂ ಸವದತ್ತಿ ರಸ್ತೆಯಿಂದ ಬರುವ ವಾಹನಗಳಿಗೆ ನೇರವಾಗಿ ಪಾರ್ಕಿಂಗ್ ಹೋಗಲು ರಸ್ತೆಗಳನ್ನು ಗುರುತಿಸಲಾಗಿದೆ. ಇದರಿಂದ ಟ್ರಾಫಿಕ್ ನಿಯಂತ್ರಣಕ್ಕೆ ಸಹಾಯವಾಗುತ್ತಿದೆ" ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.
ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲ ಕ್ರಮ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಮಾತನಾಡಿ, "ವಿವಿಧ ಭಾಗಗಳಿಂದ ಬರುವ ಭಕ್ತರಿಗೆ ಮುಖ್ಯವಾಗಿ ಪಾರ್ಕಿಂಗ್, ಲೈಟಿಂಗ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ದೇವಸ್ಥಾನದ ಸುತ್ತ ಮುತ್ತಲಿನ ರಸ್ತೆಗಳಲ್ಲಿ ಸಾರ್ವಜನಿಕರು ವಾಹನಗಳನ್ನು ಪಾರ್ಕ್ ಮಾಡಿದಾಗ ಟ್ರಾಫಿಕ್ ಸಮಸ್ಯೆಯಾಗುತ್ತಿದೆ. ಅದಕ್ಕೆ 15 ಟೊಯಿಂಗ್ ವಾಹನಗಳ ಮೂಲಕ ಪಾರ್ಕ್ ಮಾಡಿದ ವಾಹನಗಳನ್ನು ಸ್ಥಳಾಂತರಿಸಲಾಗುತ್ತಿದೆ. ದೇವಸ್ಥಾನದ ಬದಿಯ ರಸ್ತೆಗಳಲ್ಲಿ ಕೂಡ ಯಾವುದೇ ವಾಹನಗಳ ಪಾರ್ಕಿಂಗ್ ಅವಕಾಶ ಕೊಟ್ಟಿಲ್ಲ. ರಸ್ತೆಗಳ ಮೇಲಿರುವ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ಇದರಿಂದ ದೇವಸ್ಥಾನದ ಸುತ್ತ ಮುತ್ತ ಒಳ್ಳೆಯ ಸ್ವಚ್ಛ ವಾತಾವರಣ ನಿರ್ಮಾಣವಾಗಿದೆ" ಎಂದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಮರಾಠಾ ಸಾಮ್ರಾಜ್ಯದ ನೈಜ ಆಯುಧಗಳ ಅನಾವರಣ: ಶಿವಾಜಿ ಮಹಾರಾಜ ಕಾಲದ ಶಸ್ತ್ರಗಳ ಪ್ರದರ್ಶನ