ನವದೆಹಲಿ: ಭಾರತೀಯ ಸ್ಮಾರ್ಟ್ಫೋನ್ ಬಳಕೆದಾರರ ಪೈಕಿ ಶೇ 50ರಷ್ಟು ಅಂದರೆ ಇಬ್ಬರಲ್ಲಿ ಒಬ್ಬರು ತಮ್ಮ ಫೋನ್ ಅನ್ನು ಸುಮ್ಮನೆ ಅಭ್ಯಾಸ ಬಲದಿಂದ ಆಗಾಗ ಎತ್ತಿ ಅನ್ಲಾಕ್ ಮಾಡಿ ನೋಡುತ್ತಿರುತ್ತಾರೆ ಎಂದು ವರದಿಯೊಂದು ತಿಳಿಸಿದೆ. ಫೋನ್ ಕೈಗೆ ತೆಗೆದುಕೊಂಡಿದ್ದು ಯಾಕೆ, ಅದನ್ನು ಅನ್ಲಾಕ್ ಮಾಡಿದ್ದು ಯಾಕೆ ಎಂಬುದು ಅವರಿಗೆ ಗೊತ್ತೇ ಇರುವುದಿಲ್ಲ. ಇಂಥ ಬಳಕೆದಾರರು ದಿನವೊಂದಕ್ಕೆ ಸುಮಾರು 70 ರಿಂದ 80 ಬಾರಿ ಹೀಗೆ ವಿನಾಕಾರಣ ತಮ್ಮ ಸ್ಮಾರ್ಟ್ಫೋನ್ ಅನ್ನು ಕೈಗೆತ್ತಿಕೊಳ್ಳುತ್ತಾರೆ ಎಂದು ಜಾಗತಿಕ ಮ್ಯಾನೇಜ್ಮೆಂಟ್ ಕನ್ಸಲ್ಟಿಂಗ್ ಸಂಸ್ಥೆ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ (ಬಿಸಿಜಿ)ನ ವರದಿ ತಿಳಿಸಿದೆ.
ಸುಮಾರು 50 ಪ್ರತಿಶತದಷ್ಟು ಸಮಯದಲ್ಲಿ ಗ್ರಾಹಕರು ಫೋನ್ ಅನ್ನು ಏಕೆ ಕೈಗೆತ್ತಿಕೊಳ್ಳುತ್ತಾರೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲದಿರುವುದನ್ನು ನಾವು ನಮ್ಮ ಸಂಶೋಧನೆಯಲ್ಲಿ ಕಂಡುಕೊಂಡಿದ್ದೇವೆ. ಸುಮ್ಮನೆ ಅಭ್ಯಾಸ ಬಲದಿಂದ ಅವರು ಹಾಗೆ ಮಾಡುತ್ತಾರೆ ಎಂದು ಸೆಂಟರ್ ಫಾರ್ ಕಸ್ಟಮರ್ ಇನ್ಸೈಟ್ಸ್ ಇಂಡಿಯಾದ ಲೀಡ್ ಕನಿಕಾ ಸಂಘಿ ಹೇಳಿದರು.
ಭಾರತದಾದ್ಯಂತದ 1,000 ಕ್ಕೂ ಹೆಚ್ಚು ಬಳಕೆದಾರರ ವಾಸ್ತವಿಕ ಕ್ಲಿಕ್ಗಳು/ ಸ್ವ್ಯಾಪ್ ಡೇಟಾಗಳು ಮತ್ತು ಗ್ರಾಹಕರ ಸಂದರ್ಶನಗಳನ್ನು ಆಧರಿಸಿ ಈ ವರದಿ ತಯಾರಿಸಲಾಗಿದೆ. ಇನ್ನು ಶೇ 45 ರಿಂದ 50 ರಷ್ಟು ಬಳಕೆದಾರರು ಈಗ ತಾವೇನು ಮಾಡಬೇಕಿದೆ ಎಂಬ ಸ್ಪಷ್ಟತೆಯಿಂದ ಪೋನ್ ಕೈಗೆತ್ತಿಕೊಳ್ಳುತ್ತಾರೆ ಹಾಗೂ ಇನ್ನುಳಿದ ಶೇ 5 ರಿಂದ 10 ರಷ್ಟು ಬಳಕೆದಾರರು ಭಾಗಶಃ ಸ್ಪಷ್ಟತೆ ಮಾತ್ರ ಹೊಂದಿರುತ್ತಾರೆ ಎಂದು ವರದಿಯು ಕಂಡು ಹಿಡಿದಿದೆ.