ಲಂಡನ್: ಆ್ಯಪ್ ಸ್ಟೋರ್ನಲ್ಲಿ ಐಫೋನ್ ಮತ್ತು ಐಪ್ಯಾಡ್ ಬಳಕೆದಾರರಿಗೆ ಮ್ಯೂಸಿಕ್ ಸ್ಟ್ರೀಮಿಂಗ್ ಅಪ್ಲಿಕೇಶನ್ಗಳನ್ನು ನೀಡುವಾಗ ಮಾರುಕಟ್ಟೆಯಲ್ಲಿನ ತನ್ನ ಪ್ರಾಬಲ್ಯದ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಆ್ಯಪಲ್ ಕಂಪನಿಗೆ ಯುರೋಪಿಯನ್ ಯೂನಿಯನ್ ಸೋಮವಾರ 1.84 ಬಿಲಿಯನ್ ಯುರೋ (ಸುಮಾರು 2 ಬಿಲಿಯನ್ ಡಾಲರ್) ದಂಡ ವಿಧಿಸಿದೆ.
ಮ್ಯೂಸಿಕ್ ಸ್ಟ್ರೀಮಿಂಗ್ ಅಪ್ಲಿಕೇಶನ್ ಡೆವಲಪರ್ಗಳು ಅಪ್ಲಿಕೇಶನ್ನ ಹೊರಗೆ ಲಭ್ಯವಿರುವ ಪರ್ಯಾಯ ಮತ್ತು ಅಗ್ಗದ ಸಂಗೀತ ಚಂದಾದಾರಿಕೆ (music subscription) ಸೇವೆಗಳ ಬಗ್ಗೆ ಐಒಎಸ್ ಬಳಕೆದಾರರಿಗೆ ತಿಳಿಸುವುದನ್ನು ಮತ್ತು ಅಂಥ ಸೇವೆಗಳಿಗೆ ಹೇಗೆ ಚಂದಾದಾರರಾಗಬೇಕು ಎಂಬುದರ ಬಗ್ಗೆ ಯಾವುದೇ ಮಾಹಿತಿ ನೀಡುವುದನ್ನು ಆ್ಯಪಲ್ ನಿಷೇಧಿಸುತ್ತದೆ ಎಂದು ಆಯೋಗದ ತನಿಖೆಯಿಂದ ತಿಳಿದುಬಂದಿದೆ.
ಸ್ವೀಡಿಷ್ ಮ್ಯೂಸಿಕ್ ಸ್ಟ್ರೀಮಿಂಗ್ ಕಂಪನಿ ಸ್ಪಾಟಿಫೈ 2020 ರಲ್ಲಿ "ಆ್ಯಪಲ್ ಟ್ಯಾಕ್ಸ್" ಎಂದು ಕರೆಯಲ್ಪಡುವ ವಿಧಾನದ ಬಗ್ಗೆ ಆಂಟಿಟ್ರಸ್ಟ್ ದೂರು ದಾಖಲಿಸಿದ ನಂತರ ಯುರೋಪಿಯನ್ ಯೂನಿಯನ್ನಲ್ಲಿ ಈ ಬಗ್ಗೆ ತನಿಖೆ ಆರಂಭಿಸಲಾಗಿತ್ತು.
"ಒಂದು ದಶಕದಿಂದ ಆ್ಯಪ್ ಸ್ಟೋರ್ ಮೂಲಕ ಮ್ಯೂಸಿಕ್ ಸ್ಟ್ರೀಮಿಂಗ್ ಅಪ್ಲಿಕೇಶನ್ಗಳ ವಿತರಣೆಗಾಗಿ ಆ್ಯಪಲ್ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯದ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದೆ" ಎಂದು ಸ್ಪರ್ಧಾ ನೀತಿಯ (competition policy) ಉಸ್ತುವಾರಿ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮಾರ್ಗ್ರೆತ್ ವೆಸ್ಟೇಜರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.