ಶ್ರೀಹರಿಕೋಟಾ(ಆಂಧ್ರಪ್ರದೇಶ): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಭೂ ವೀಕ್ಷಣಾ ಉಪಗ್ರಹ-08 ಭೂ ಪರಿವೀಕ್ಷಣಾ ಉಪಗ್ರಹವನ್ನು ಹೊತ್ತ ಎಸ್‌ಎಸ್‌ಎಲ್‌ವಿ-ಡಿ3 (ಸಣ್ಣ ಉಪಗ್ರಹ ಉಡಾವಣಾ ವಾಹನ- ಡಿ3) ರಾಕೆಟ್ ಅನ್ನು ಇಂದು ಬೆಳಗ್ಗೆ 9.17ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.
ಪಿಎಸ್ಎಲ್ವಿ- ಸಿ58/ಎಕ್ಸ್ಪೋಸಾಟ್ ಹಾಗೂ ಜಿಎಸ್ಎಲ್ವಿ-ಎಫ್14/ಇನ್ಸಾಟ್-3ಡಿಎಸ್ ಮಿಷನ್ಗಳ ಯಶಸ್ವಿ ಉಡಾವಣೆ ಬಳಿಕ 2024ರಲ್ಲಿ ಇದು ಇಸ್ರೋದ ಮೂರನೇ ಯಶಸ್ವಿ ಉಡಾವಣೆಯಾಗಿದೆ. ಈ ಮೂಲಕ ಚಂದ್ರಯಾನ-3ರ ಬಳಿಕ ಇಸ್ರೋ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.
ಉಡಾವಣೆಯ 17 ನಿಮಿಷಗಳ ನಂತರ EOS-08 ಉಪಗ್ರಹ ಉದ್ದೇಶಿತ 475 ಮೀ. ವೃತ್ತಾಕಾರದ ಕಕ್ಷೆಯನ್ನು ಸೇರಿದೆ. ಉಡಾವಣೆ ನಂತರ ಇಸ್ರೋ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ, "ಎಸ್‌ಎಸ್‌ಎಲ್‌ವಿ-ಡಿ3 ನೌಕೆ ಇಒಎಸ್-08 ಭೂ ಪರಿವೀಕ್ಷಣಾ ಉಪಗ್ರಹವನ್ನು ನಿಖರವಾಗಿ ಕಕ್ಷೆಗೆ ಸೇರಿಸಿತು" ಎಂದು ಮಾಹಿತಿ ಹಂಚಿಕೊಂಡಿದೆ.
ಇಸ್ರೋದ ಅಧ್ಯಕ್ಷ ಎಸ್. ಸೋಮನಾಥ್ ಮಾತನಾಡಿ, "ಎಸ್ಎಸ್ಎಲ್ವಿಯ ಸರಣಿಯ ಮೂರನೇ ಅಭಿವೃದ್ಧಿ ನೌಕೆ, EOS-08 ಉಪಗ್ರಹವನ್ನು ಹೊತ್ತು ಸಾಗಿದ ಎಸ್‌ಎಸ್‌ಎಲ್‌ವಿ-ಡಿ3 ಉಡಾವಣೆ ಯಶಸ್ವಿಯಾಗಿದೆ. ರಾಕೆಟ್ ಯೋಜಿಸಿದಂತೆ ಬಾಹ್ಯಾಕಾಶ ನೌಕೆಯನ್ನು ಅತ್ಯಂತ ನಿಖರವಾದ ಕಕ್ಷೆಯಲ್ಲಿ ಇರಿಸಿದೆ. ಸದ್ಯದ ಯಾವುದೇ ತೊಂದರೆಗಳಿಲ್ಲ. ಟ್ರ್ಯಾಕಿಂಗ್ ನಂತರ ಅಂತಿಮ ಕಕ್ಷೆಯ ಬಗ್ಗೆ ತಿಳಿಯಲಿದೆ. ಸದ್ಯದ ಎಲ್ಲವೂ ಪರಿಪೂರ್ಣವಾಗಿದೆ" ಎಂದು ಹೇಳಿದ್ದಾರೆ.