ಹೈದರಾಬಾದ್: ಡ್ರೋನ್ ತಯಾರಿಕೆ, ನಿಯೋಜನೆ ಮತ್ತು ಅದರ ಸೇವೆಗಳ ಬಳಕೆ ಹೆಚ್ಚಿಸುವ ಉದ್ದೇಶದಿಂದ ಆಂಧ್ರ ಪ್ರದೇಶ ಸರ್ಕಾರ ಅಮರಾವತಿ ಡ್ರೋನ್ ಶೃಂಗಸಭೆ- 2024ನ್ನು ಆಯೋಜಿಸುತ್ತಿದೆ. ಇದೇ ಅಕ್ಟೋಬರ್ 22 ಮತ್ತು 23ರಂದು ವಿಜಯವಾಡದಲ್ಲಿ ಈ ಸಭೆ ನಡೆಯಲಿದ್ದು, ಸೃಜನಾತ್ಮಕತೆಗೆ ಪ್ರೋತ್ಸಾಹ ನೀಡಲಿದೆ.
ನಾಗರಿಕ ಸೇವೆಯಲ್ಲಿ ಕೂಡ ಆಂಧ್ರ ಪ್ರದೇಶ ಸರ್ಕಾರವು ಈ ಡ್ರೋನ್ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಕೆ ಮಾಡುವ ಭರವಸೆಯನ್ನು ವ್ಯಕ್ತಪಡಿಸಿದೆ. ಡ್ರೋನ್ ಕೌಶಲ್ಯವನ್ನು ವೇದಿಕೆಯಲ್ಲಿ ತರಲು ಕೂಡ ಸರ್ಕಾರ ಆಶಿಸುತ್ತಿದ್ದು, ಕೆಲವು ಇಲಾಖೆಗಳಲ್ಲಿ ಕೂಡ ಡ್ರೋನ್ ಸೇವೆಯನ್ನು ವಿಸ್ತರಿಸುತ್ತಿದೆ. ಈ ನಿಟ್ಟಿನಲ್ಲಿ ಈ ಕ್ಷೇತ್ರದಲ್ಲಿನ ಬದಲಾವಣೆಗಳು ಯಾವುವು? ಕೃತಕ ಬುದ್ಧಿಮತ್ತೆ ಬಳಕೆ ಮಾಡಿಕೊಂಡು ಉತ್ತಮ ಸೇವೆಗಳಿಗೆ ಅವಕಾಶಗಳು ಯಾವುವು? ಇತರೆ ವಿಷಯಗಳ ಕುರಿತು ಕೂಡ ಶೃಂಗಸಭೆಯಲ್ಲಿ ಚರ್ಚಿಸಲಾಗುತ್ತಿದೆ.
ಈ ರೀತಿಯ ಅಂತಾರಾಷ್ಟ್ರೀಯ ಡ್ರೋನ್ ಶೃಂಗಸಭೆಯನ್ನು ನಡೆಸುವ ಮೂಲಕ ಜಾಗತಿಕ ಗಮನವನ್ನು ಸೆಳೆಯುವ ಆಶಯವನ್ನು ಸರ್ಕಾರ ಹೊಂದಿದ್ದು, ಇದಕ್ಕಾಗಿ ಕೃಷ್ಣಾ ನದಿ ದಡದಲ್ಲಿ 5 ಸಾವಿರ ಡ್ರೋನ್ ಗಳೊಂದಿಗೆ ಪ್ರಾತ್ಯಕ್ಷಿಕೆ ಆಯೋಜಿಸಿದೆ.
ತಂತ್ರಜ್ಞಾನವನ್ನು ತಲುಪಿಸುವ ಉದ್ದೇಶ: ಪ್ರದರ್ಶನದಲ್ಲಿ ಡ್ರೋನ್‌ಗಳ ಕ್ಷೇತ್ರದಲ್ಲಿ ಅವಿಷ್ಕಾರರು, ತಂತ್ರಜ್ಞಾನ ತಜ್ಞರು, ಸ್ಟಾರ್ಟ್‌ಅಪ್‌ಗಳು ಮತ್ತು ಉದ್ಯಮ ಕಾರ್ಯನಿರ್ವಾಹಕರು ತಮ್ಮ ಸಾಮರ್ಥ್ಯಗಳನ್ನು ಪ್ರದರ್ಶಿಸಲಿದ್ದಾರೆ. ಕೃಷಿ, ಗ್ರಾಮೀಣಾಭಿವೃದ್ಧಿ, ನಗರ ಯೋಜನೆ, ಕಾನೂನು ಮತ್ತು ಸುವ್ಯವಸ್ಥೆ, ಆರೋಗ್ಯ ಮತ್ತು ಪರಿಸರ ಸಂರಕ್ಷಣೆ ಕ್ಷೇತ್ರಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಡ್ರೋನ್‌ಗಳು ಎಷ್ಟರಮಟ್ಟಿಗೆ ಉಪಯುಕ್ತವಾಗಬಹುದು ಎಂಬುದರ ಕುರಿತು ಸರ್ಕಾರವು ವಿಷನ್ ಪೇಪರ್ ಅನ್ನು ಸಿದ್ಧಪಡಿಸಲಿದೆ.