ನವದೆಹಲಿ: ಎಲೋನ್ ಮಸ್ಕ್ ಒಡೆತನದ ಕಂಪನಿ ಸ್ಟಾರ್ ಲಿಂಕ್ ಇನ್ನು ಮುಂದೆ ಶ್ರೀಲಂಕಾದಲ್ಲಿ ತನ್ನ ಉಪಗ್ರಹ ಇಂಟರ್ ನೆಟ್ ಸೇವೆಗಳನ್ನು ಆರಂಭಿಸಲಿದೆ ಎಂದು ಶ್ರೀಲಂಕಾ ಸರ್ಕಾರ ಹೇಳಿದೆ. ದೇಶದಲ್ಲಿ ಉಪಗ್ರಹ ಸೇವೆಯನ್ನು ಪ್ರಾರಂಭಿಸಲು ಸ್ಟಾರ್ ಲಿಂಕ್ಗೆ ಶ್ರೀಲಂಕಾ ಅನುಮೋದನೆ ನೀಡಿದೆ ಎಂದು ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಹೇಳಿದ್ದಾರೆ.
"ಶ್ರೀಲಂಕಾದಲ್ಲಿ ಉಪಗ್ರಹ ಇಂಟರ್ನೆಟ್ ಸೇವೆಗಳನ್ನು ಪ್ರಾರಂಭಿಸಲು ದೇಶದ ದೂರಸಂಪರ್ಕ ನಿಯಂತ್ರಣ ಆಯೋಗ (ಟಿಆರ್ಸಿಎಸ್ಎಲ್)ವು ಸ್ಟಾರ್ ಲಿಂಕ್ಗೆ ಅನುಮತಿ ನೀಡಿದೆ. ಎರಡು ವಾರಗಳ ಕಾಲ ಸಾರ್ವಜನಿಕ ಸಮಾಲೋಚನೆ ನಡೆಸುವುದು ಮಾತ್ರ ಬಾಕಿ ಇದೆ" ಎಂದು ರನಿಲ್ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ಡಾಟ್ ಕಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಸ್ಕ್ "ತುಂಬಾ ಮೆಚ್ಚುಗೆಯ ವಿಚಾರ" ಎಂದು ಬರೆದಿದ್ದಾರೆ.
ಎರಡು ದಿನಗಳ ಹಿಂದೆ ಔಪಚಾರಿಕ ಸಾರ್ವಜನಿಕ ಸಮಾಲೋಚನೆ ಪ್ರಕ್ರಿಯೆಯ ನಂತರ ನಿಯಂತ್ರಕ ಪ್ರಾಧಿಕಾರವು ಸ್ಟಾರ್ ಲಿಂಕ್ಗೆ ಪ್ರಾಥಮಿಕ ಅನುಮೋದನೆ ನೀಡಿತ್ತು.
"ಸ್ಟಾರ್ ಲಿಂಕ್ ಆರಂಭವಾಗುವುದರಿಂದ ನಮ್ಮ ದೇಶದಲ್ಲಿ ಸಂಪರ್ಕ ಕ್ರಾಂತಿ ಉಂಟಾಗಲಿದೆ, ಇದು ವಿಶೇಷವಾಗಿ ನಮ್ಮ ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ" ಎಂದು ರನಿಲ್ ಹೇಳಿದರು.
"ಸ್ಟಾರ್ಲಿಂಕ್ ಶ್ರೀಲಂಕಾ ದೇಶದಲ್ಲಿ ಮಹತ್ವದ ಪರಿವರ್ತನೆಯನ್ನು ತರಲಿದೆ. ವೇಗದ ಮತ್ತು ಹೆಚ್ಚು ವಿಶ್ವಾಸಾರ್ಹ ಇಂಟರ್ ನೆಟ್ ದೇಶದ ಯುವಕರಿಗೆ ಜಾಗತಿಕ ಶಿಕ್ಷಣ ಸಂಪನ್ಮೂಲಗಳನ್ನು ಬಳಸಿಕೊಳ್ಳಲು, ನವೀನ ಯೋಜನೆಗಳಲ್ಲಿ ಸಹಕರಿಸಲು ಮತ್ತು ಈ ಹೊಸ ಡಿಜಿಟಲ್ ಯುಗದಲ್ಲಿ ಅಭಿವೃದ್ಧಿ ಹೊಂದಲು ಅನುವು ಮಾಡಿಕೊಡುತ್ತದೆ. ಇದು ಶಿಕ್ಷಣ ಮತ್ತು ಮೀನುಗಾರಿಕೆ ಕ್ಷೇತ್ರಗಳಲ್ಲಿನ ಸಮಸ್ಯೆಗಳಿಗೆ ಪರಿಹಾರ ಒದಗಿಸಲಿದೆ" ಎಂದು ಅವರು ತಿಳಿಸಿದರು.
ದ್ವೀಪ ಸಮೂಹ ದೇಶವಾದ ಇಂಡೋನೇಷ್ಯಾದಲ್ಲಿ ಇದೇ ವರ್ಷದ ಮೇ ತಿಂಗಳಲ್ಲಿ ಸ್ಟಾರ್ ಲಿಂಕ್ ಇಂಟರ್ ನೆಟ್ ಆರಂಭವಾಗಿದೆ. ಅದರ ನಂತರ ಫಿಜಿ ದೇಶದಲ್ಲಿಯೂ ಈ ಸೌಲಭ್ಯವನ್ನು ವಿಸ್ತರಿಸಲಾಗಿದೆ.
ಸ್ಟಾರ್ ಲಿಂಕ್ ಇದು ದುರ್ಗಮ ಸ್ಥಳಗಳಲ್ಲಿಯೂ ಕಡಿಮೆ ವೆಚ್ಚದಲ್ಲಿ ಇಂಟರ್ ನೆಟ್ ಸೌಲಭ್ಯ ಒದಗಿಸುವ ಖಾಸಗಿ ಬಾಹ್ಯಾಕಾಶ ಕಂಪನಿ ಸ್ಪೇಸ್ ಎಕ್ಸ್ ಅಭಿವೃದ್ಧಿಪಡಿಸಿದ ಉಪಗ್ರಹ ಜಾಲವಾಗಿದೆ. ಸ್ಟಾರ್ಲಿಂಕ್ ಉಪಗ್ರಹವು ಸರಿಸುಮಾರು ಐದು ವರ್ಷಗಳ ಜೀವಿತಾವಧಿಯನ್ನು ಹೊಂದಿದೆ ಮತ್ತು ಸ್ಪೇಸ್ಎಕ್ಸ್ ಅಂತಿಮವಾಗಿ ಮೆಗಾ ಕಾನ್ಸ್ಟೆಲೇಶನ್ ಎಂದು ಕರೆಯಲ್ಪಡುವ ವ್ಯವಸ್ಥೆಯಲ್ಲಿ 42,000 ಉಪಗ್ರಹಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ : 4ನೇ ಪರೀಕ್ಷಾ ಹಾರಾಟ ಯಶಸ್ವಿಯಾಗಿ ಮುಗಿಸಿದ ಸ್ಪೇಸ್ ಎಕ್ಸ್ನ ಸ್ಟಾರ್ಶಿಪ್ ರಾಕೆಟ್ - Starship test flight