ನವದೆಹಲಿ : ತಮ್ಮ ಕಂಪನಿಗಳ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ವ್ಯಾಪಾರ ವಹಿವಾಟು ವಿಸ್ತರಣೆಯ ಗುರಿ ಸಾಧನೆಗೆ ಅಗತ್ಯವಾದ ಐಟಿ ಅಗತ್ಯಗಳನ್ನು ಪೂರೈಸಲು ಮುಂದಿನ 12 ತಿಂಗಳಲ್ಲಿ ಉತ್ಪಾದನಾ ಕೃತಕ ಬುದ್ಧಿಮತ್ತೆಯನ್ನು (ಜೆಎನ್ಎಐ) ತಂತ್ರಜ್ಞಾನವನ್ನು ಬಳಸಿಕೊಳ್ಳಲು ಸುಮಾರು ಶೇಕಡಾ 73 ರಷ್ಟು ಭಾರತೀಯ ಕಂಪನಿಗಳು ಉದ್ದೇಶಿಸಿವೆ ಎಂದು ಹೊಸ ವರದಿಯೊಂದು ಸೋಮವಾರ ತಿಳಿಸಿದೆ.
ಆದಾಗ್ಯೂ, ಜೆನ್ಎಐ ತಂತ್ರಜ್ಞಾನವನ್ನು ಯಶಸ್ವಿಯಾಗಿ ಅಳವಡಿಸಿಕೊಳ್ಳಬಹುದು ಎಂಬ ಬಗ್ಗೆ ಕೇವಲ ಶೇಕಡಾ 8 ರಷ್ಟು ಕಂಪನಿಗಳು ಮಾತ್ರ ಹೆಚ್ಚಿನ ವಿಶ್ವಾಸ ಹೊಂದಿವೆ ಎಂದು ಮ್ಯಾನೇಜ್ಮೆಂಟ್ ಕಂಪನಿ ಟೆನಬಲ್ (Tenable) ತಿಳಿಸಿದೆ.
ಅಕ್ಟೋಬರ್ 2023 ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ 52 ಭಾರತೀಯರು ಸೇರಿದಂತೆ 826 ಐಟಿ ಮತ್ತು ಸೈಬರ್ ಸೆಕ್ಯುರಿಟಿ ವೃತ್ತಿಪರರನ್ನು ಸಮೀಕ್ಷೆಗೆ ಒಳಪಡಿಸಿ ಈ ವರದಿ ತಯಾರಿಸಲಾಗಿದೆ.
"ಎಐ ತಂತ್ರಜ್ಞಾನದ ಬೆಳವಣಿಗೆಯ ಹೊರತಾಗಿಯೂ, ಅನೇಕ ಭಾರತೀಯ ವ್ಯವಹಾರಗಳು ಇನ್ನೂ ತಮ್ಮ ತಂತ್ರಜ್ಞಾನ ಪರಿಪಕ್ವತೆಯನ್ನು ಅಭಿವೃದ್ಧಿಪಡಿಸುತ್ತಿವೆ. ಈ ಕಂಪನಿಗಳಿಗೆ ಎಐ ಅನ್ನು ಸರಿಯಾಗಿ ರಚಿಸಲು, ತರಬೇತಿ ನೀಡಲು ಮತ್ತು ಕಾರ್ಯಗತಗೊಳಿಸಲು ಅಗತ್ಯವಾದ ಸಂಪನ್ಮೂಲಗಳು ಅಥವಾ ಕೌಶಲ್ಯಗಳ ಕೊರತೆಯಿದೆ. ಜೊತೆಗೆ ಡೇಟಾ ಆಡಳಿತದ ಉನ್ನತ ಮಾನದಂಡಗಳನ್ನು ಕಾಪಾಡಿಕೊಳ್ಳಲು ಬೇಕಾದ ಕೌಶಲವೂ ಇವುಗಳ ಬಳಿ ಇಲ್ಲ" ಎಂದು ಟೆನಬಲ್ ಎಪಿಜೆಯ ಹಿರಿಯ ಉಪಾಧ್ಯಕ್ಷ ನಿಗೆಲ್ ಎನ್ಜಿ ಹೇಳಿದರು.
ಭಾರತೀಯ ಸಂಸ್ಥೆಗಳು ಎಐ ತಂತ್ರಜ್ಞಾನಗಳನ್ನು ಬಳಸಲು ಅಥವಾ ಉತ್ತಮಗೊಳಿಸಲು ಅಡ್ಡಿಯಾಗುತ್ತಿರುವ ಎರಡು ಪ್ರಮುಖ ಸವಾಲುಗಳನ್ನು ವರದಿ ಗುರುತಿಸಿದೆ. ಅವು- ತಾಂತ್ರಿಕ ಪ್ರಬುದ್ಧತೆಯ ಕೊರತೆ (71 ಪ್ರತಿಶತ) ಮತ್ತು ತಮ್ಮ ಕಾರ್ಯಾಚರಣೆಗಳಲ್ಲಿ ಎಐ ಅನ್ವಯಿಸುವ ಬಗ್ಗೆ ಅನಿಶ್ಚಿತತೆ (54 ಪ್ರತಿಶತ).