ನವದೆಹಲಿ:2023 ರಲ್ಲಿ ಹೆಚ್ಚು ಮಾರಾಟವಾದ 10 ಸ್ಮಾರ್ಟ್ಪೋನ್ಗಳ ಜಾಗತಿಕ ಪಟ್ಟಿಯಲ್ಲಿ ಆ್ಯಪಲ್ ಮೊದಲ ಬಾರಿಗೆ ಅಗ್ರ ಏಳು ಸ್ಥಾನಗಳನ್ನು ಪಡೆದುಕೊಂಡಿದೆ ಎಂದು ವರದಿಯೊಂದು ಬುಧವಾರ ತೋರಿಸಿದೆ. ಹಾಗೆಯೇ ಭಾರತವು ಒಂದೇ ವರ್ಷದಲ್ಲಿ 10 ಮಿಲಿಯನ್ ಐಫೋನ್ ಮಾರಾಟ ದಾಟಿದ ಐದನೇ ಸ್ಮಾರ್ಟ್ಫೋನ್ ಮಾರುಕಟ್ಟೆಯಾಗಿದೆ.
ಟಾಪ್ 10 ಸ್ಮಾರ್ಟ್ ಫೋನ್ಗಳ ಒಟ್ಟಾರೆ ಮಾರುಕಟ್ಟೆ ಪಾಲು 2022 ರಲ್ಲಿ ಇದ್ದ ಶೇಕಡಾ 19 ರಿಂದ 2023 ರಲ್ಲಿ ಶೇಕಡಾ 20 ಕ್ಕೆ ತಲುಪಿದೆ. ಆ್ಯಪಲ್ನ ಐಫೋನ್ 14 ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್ ಫೋನ್ ಆಗಿದ್ದು, ಈ ಪೈಕಿ ಅರ್ಧದಷ್ಟು ಮಾರಾಟ ಯುಎಸ್ ಮತ್ತು ಚೀನಾದಲ್ಲೇ ಆಗಿದೆ. ಐಫೋನ್ 15 ಸರಣಿಯು 2023 ರ ನಾಲ್ಕನೇ ತ್ರೈಮಾಸಿಕದಲ್ಲಿ ಜಾಗತಿಕ ಬೆಸ್ಟ್ ಸೆಲ್ಲರ್ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿದೆ. ಈ ಸರಣಿಯ ಐಫೋನ್ 15 ಪ್ರೊ ಮ್ಯಾಕ್ಸ್ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್ ಫೋನ್ ಆಗಿದೆ.
ಪಟ್ಟಿಯಲ್ಲಿ ಅತ್ಯಂತ ಹಳೆಯ ಮಾದರಿಯಾಗಿರುವ ಆ್ಯಪಲ್ನ ಐಫೋನ್ 13 ಜಪಾನ್ ಮತ್ತು ಭಾರತದಲ್ಲಿ ಎರಡಂಕಿ ಬೆಳವಣಿಗೆಯೊಂದಿಗೆ ನಾಲ್ಕನೇ ಸ್ಥಾನವನ್ನು ಉಳಿಸಿಕೊಂಡಿದೆ. ಸ್ಯಾಮ್ಸಂಗ್ನ ಬಜೆಟ್ ಎ ಸರಣಿಯು ವಿವಿಧ ಪ್ರದೇಶಗಳು ಮತ್ತು ಗ್ರಾಹಕ ವಿಭಾಗಗಳಲ್ಲಿ ಟಾಪ್ -10 ಪಟ್ಟಿಯಲ್ಲಿ ಮೂರು ಸ್ಥಾನಗಳನ್ನು ಪಡೆದುಕೊಂಡಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎ 14 5ಜಿ ಯುಎಸ್ ಮತ್ತು ಭಾರತದಲ್ಲಿ ಹೆಚ್ಚಿನ ಮಾರಾಟ ಕಂಡಿದ್ದು, ಏಳನೇ ಸ್ಥಾನ ಪಡೆದುಕೊಂಡಿದೆ.