ಯುವ ರಾಜ್ಕುಮಾರ್ ಅಭಿನಯದ ಎರಡನೇ ಸಿನಿಮಾ ''ಎಕ್ಕ''. ಶೀರ್ಷಿಕೆಯಿಂದಲೇ ಸ್ಯಾಂಡಲ್ವುಡ್ನಲ್ಲಿ ಸಖತ್ ಟಾಕ್ ಆಗುತ್ತಿರುವ "ಎಕ್ಕ" ಚಿತ್ರದ ಮುಹೂರ್ತ ಸಮಾರಂಭ ಇಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಶ್ರೀ ಬಂಡೆಮಾಕಾಳಮ್ಮ ದೇವಸ್ಥಾನದಲ್ಲಿ ನೆರವೇರಿತು.
ಹೊಂಬಾಳೆ ಫಿಲ್ಮ್ ಸಂಸ್ಥೆಯ ವಿಜಯ್ ಕಿರಗಂದೂರ್ ಅವರ ಪತ್ನಿ ಶೈಲಜಾ ವಿಜಯ್ ಕ್ಲಾಪ್ ಮಾಡುವ ಮೂಲಕ ಎಕ್ಕ ಚಿತ್ರಕ್ಕೆ ಚಾಲನೆ ನೀಡಿದರು. ಮೊದಲ ಶಾಟ್ ಅನ್ನು ನಟರಾಕ್ಷಸ ಡಾಲಿ ಧನಂಜಯ್ ನಿರ್ದೇಶಿಸಿದ್ದು, ನಿರ್ಮಾಪಕ ಕಾರ್ತಿಕ್ ಗೌಡ ಅವರ ತಾಯಿ ವಿಜಯಲಕ್ಷ್ಮೀ ರಾಮಕೃಷ್ಣ ಕ್ಯಾಮರಾ ಬಟನ್ ಆನ್ ಮಾಡುವ ಮೂಲಕ ಚಾಲನೆ ನೀಡಿದರು. ಕಾಶ್ಮೀರ, ಬೆಂಗಳೂರು, ಮೈಸೂರು, ದೆಹಲಿ, ಕೋಲ್ಕತ್ತಾ, ಮುಂಬೈ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ.
ಚಿತ್ರದ ನಿರ್ದೇಶಕ ರೋಹಿತ್ ಪದಕಿ ಮಾತನಾಡಿ, ''ಎಕ್ಕ ಒಂದು ಮೆಗಾ ಚಿತ್ರವಾಗಿದ್ದು, ಇದರ ಜವಾಬ್ದಾರಿ ಹೊತ್ತಿರುವ ಹೆಮ್ಮೆ ನನಗಿದೆ. ಚಿತ್ರದ ಎಲ್ಲಾ ನಿರ್ಮಾಪಕರು, ಕನ್ನಡದ ಜನರು, ಯುವ ರಾಜ್ಕುಮಾರ್ ಮತ್ತು ಅವರ ಅಭಿಮಾನಿಗಳ ನಂಬಿಕೆಯನ್ನು ಈ ಚಿತ್ರ ಉಳಿಸಲಿದೆ. ಜನರ ಮೇಲೆ ಆಳವಾದ ಭಾವನಾತ್ಮಕ ಪ್ರಭಾವ ಬೀರಲಿದೆ'' ಎಂದು ತಿಳಿಸಿದರು.
ಚಿತ್ರದ ನಾಯಕ ನಟ ಯುವ ರಾಜ್ಕುಮಾರ್ ಮಾತನಾಡಿ, "ತಾಯಿ ಮತ್ತು ಅಪ್ಪು ಚಿಕ್ಕಪ್ಪನ ಆಶೀರ್ವಾದದೊಂದಿಗೆ ಇಂದು ಎಕ್ಕ ಚಿತ್ರವನ್ನು ಆರಂಭಿಸಿದ್ದೇವೆ. ಮೂರು ಹೆಸರಾಂತ ಚಲನಚಿತ್ರ ನಿರ್ಮಾಣ ಸಂಸ್ಥೆಗಳೊಡನೆ, ರೋಹಿತ್ ಪದಕಿ ಅಂತಹ ದೊಡ್ಡ ನಿರ್ದೇಶಕರೊಂದಿಗೆ ಕೆಲಸ ಮಾಡುತ್ತಿರುವುದು ನನಗೆ ತುಂಬಾನೇ ಖುಷಿ ಇದೆ" ಎಂದು ಖುಷಿ ಹಂಚಿಕೊಂಡರು.
ಚಿತ್ರದ ನಾಯಕ ನಟಿ ಸಂಪದಾ ಮಾತನಾಡಿ, ಎಕ್ಕ ಚಿತ್ರದ ಆರಂಭ ಬಹಳ ಮಂಗಳಕರವಾಗಿ ನೆರವೇರಿರುವುದು ಖುಷಿಯ ವಿಷಯ. ಚಿತ್ರೀಕರಣಕ್ಕಾಗಿ ನಾನು ಕಾತರದಿಂದ ಎದುರು ನೋಡುತ್ತಿದೇನೆ ಎಂದು ತಿಳಿಸಿದರು. ರೋಹಿತ್ ಪದಕಿ ನಿರ್ದೇಶನದ ಎಕ್ಕ ಒಬ್ಬ ಯುವಕನ ಕಥೆ ಹೇಳಲಿದೆ. ಓರ್ವ ವ್ಯಕ್ತಿ ಭೂಗತ ಲೋಕಕ್ಕೆ ತುತ್ತಾದಾಗ, ಆತನಿಗೆ ಆಗುವ ಅನುಭವಗಳನ್ನು ಇದು ತೆರೆದಿಡಲಿದೆ.
ಇದನ್ನೂ ಓದಿ: ನಾ ಸಾಮಿ ಸಾಂಗ್ಗೆ ರಶ್ಮಿಕಾ ಮಸ್ತ್ ಡ್ಯಾನ್ಸ್: 'ನೀವಿಲ್ಲದೇ ನನಗೆ ನಟಿಸಲು ಸಾಧ್ಯವಾಗುತ್ತಿರಲಿಲ್ಲ'ವೆಂದ ಅಲ್ಲು ಅರ್ಜುನ್
ಚಿತ್ರದಲ್ಲಿ ಯುವ ರಾಜ್ಕುಮಾರ್, ಸಂಪದಾ ಜೊತೆಗೆ ಅತುಲ್ ಕುಲಕರ್ಣೀ, ಶ್ರುತಿ ಕೃಷ್ಣ, ರಾಹುಲ್ ದೇವ್ ಶೆಟ್ಟಿ ಸೇರಿದಂತೆ ಹಲವರು ನಟಿಸಲಿದ್ದು, ಚಿತ್ರಕಥೆಯನ್ನು ರೋಹಿತ್ ಪದಕಿ ಮತ್ತು ವಿಕ್ರಮ್ ಹತ್ವಾರ್ ರಚಿಸಿರುತ್ತಾರೆ. ಸಂಗೀತವನ್ನು ಚರಣ್ ರಾಜ್ ಸಂಯೋಜಿಸಲಿದ್ದು, ಹಾಡುಗಳಿಗೆ ಸಾಹಿತ್ಯವನ್ನು ವಿ. ನಾಗೇಂದ್ರ ಪ್ರಸಾದ್, ನಾಗಾರ್ಜುನ ಶರ್ಮ, ಡಾಲಿ ಧನಂಜಯ್, ರೋಹಿತ್ ಪದಕಿ ಒದಗಿಸಲಿದ್ದಾರೆ.
ಇದನ್ನೂ ಓದಿ: 'ಕೃಷ್ಣಂ ಪ್ರಣಯ ಸಖಿ' ಒಟಿಟಿ ಪ್ರವೇಶಕ್ಕೆ ಕ್ಷಣಗಣನೆ: ಇದು ಶತದಿನ ಸಂಭ್ರಮ ಕಂಡ ಗೋಲ್ಡನ್ ಸ್ಟಾರ್ ಸಿನಿಮಾ
ಸತ್ಯ ಹೆಗಡೆ ಮುಖ್ಯ ಛಾಯಾಗ್ರಾಹಕರಾಗಿದ್ದು, ದೀಪು ಎಸ್ ಕುಮಾರ್ ಸಂಕಲನಕಾರರಾಗಲಿದ್ದಾರೆ. ವಿಶ್ವಾಸ್ ಕಶ್ಯಪ್ ಪ್ರೊಡಕ್ಷನ್ ವಿನ್ಯಾಸವನ್ನು ಮಾಡಲಿದ್ದಾರೆ. ಚಿತ್ರದ ಫೈಟ್ಗಳನ್ನು ಅರ್ಜುನ್ ರಾಜ್ ಮತ್ತು ಚೇತನ್ ಡಿಸೊಜಾ ನಿರ್ದೇಶಿಸಲಿದ್ದಾರೆ. ಸಿನಿಮಾವನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಪಿ.ಆರ್.ಕೆ ಪ್ರೊಡಕ್ಷನ್ಸ್ ಲಾಂಛನದಡಿ, ಜಯಣ್ಣ ಮತ್ತು ಭೋಗೇಂದ್ರ ಜಯಣ್ಣ ಫಿಲಂಸ್ ಲಾಂಛನದಡಿ, ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಕೆ.ಆರ್.ಜಿ.ಸ್ಟುಡಿಯೋಸ್ ಲಾಂಛನದಡಿಯಲ್ಲಿ ನಿರ್ಮಿಸಲ್ಲಿದ್ದಾರೆ. ಎಕ್ಕ ಚಿತ್ರ 2025ರ ಜೂನ್ 6 ರಂದು ತೆರೆ ಕಾಣುವುದಾಗಿ ಚಿತ್ರತಂಡ ತಿಳಿಸಿದೆ. ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸುವ ವಿಶ್ವಾಸದಲ್ಲಿದೆ.