ನವದೆಹಲಿ: 6th-gen Samsung Galaxy Mobile: ಸ್ಯಾಮ್ಸಂಗ್ ಗ್ಯಾಲಕ್ಸಿ 6ನೇ ತಲೆಮಾರಿನ (sixth-generation) ಮಡಚಬಹುದಾದ ಸ್ಮಾರ್ಟ್ಫೋನ್ಗಳು ಸೇರಿದಂತೆ ಇತರ ಹೊಸ ಉತ್ಪನ್ನಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿರುವುದಾಗಿ ಕಂಪನಿ ಬುಧವಾರ ಘೋಷಿಸಿದೆ. ಗ್ಯಾಲಕ್ಸಿ ಝಡ್ ಫೋಲ್ಡ್ 6, ಗ್ಯಾಲಕ್ಸಿ ಝಡ್ ಫ್ಲಿಪ್ 6 ಮತ್ತು ಗ್ಯಾಲಕ್ಸಿ ಕನೆಕ್ಟೆಡ್ ಇಕೋಸಿಸ್ಟಮ್ ಉತ್ಪನ್ನಗಳು ಈಗ ದೇಶಾದ್ಯಂತ ಚಿಲ್ಲರೆ ಮಳಿಗೆಗಳಲ್ಲಿ ಮಾರಾಟಕ್ಕೆ ಲಭ್ಯವಿರುತ್ತವೆ.
ಗ್ರಾಹಕರು 24 ತಿಂಗಳ ಅವಧಿಯ ನೋ ಕಾಸ್ಟ್ ಇಎಂಐ ಯೋಜನೆಯಡಿ ಗ್ಯಾಲಕ್ಸಿ ಝಡ್ ಫ್ಲಿಪ್ 6 ಅನ್ನು ಕೇವಲ 4,250 ರೂ.ಗೆ ಮತ್ತು ಗ್ಯಾಲಕ್ಸಿ ಝಡ್ ಫೋಲ್ಡ್ 6 ಅನ್ನು ಕೇವಲ 6,542 ರೂ.ಗಳಿಗೆ ಕೊಳ್ಳಬಹುದು ಎಂದು ಕಂಪನಿ ಹೇಳಿದೆ. ಹಿಂದಿನ ತಲೆಮಾರಿನ ಫೋಲ್ಡಬಲ್ ಸ್ಮಾರ್ಟ್ಫೋನ್ಗಳಿಗೆ ಹೋಲಿಸಿದರೆ ಮೊದಲ 24 ಗಂಟೆಗಳಲ್ಲಿ, ಭಾರತದಲ್ಲಿ ಗ್ಯಾಲಕ್ಸಿ ಝಡ್ ಫೋಲ್ಡ್ 6 ಮತ್ತು ಝಡ್ ಫ್ಲಿಪ್ 6 ಗಳು ಶೇ 40ರಷ್ಟು ಹೆಚ್ಚು ಪ್ರಿ-ಬುಕಿಂಗ್ ಪಡೆದುಕೊಂಡಿವೆ ಎಂದು ಕಂಪನಿ ತಿಳಿಸಿದೆ.
ಸದ್ಯ ಕಂಪನಿಯ ನೋಯ್ಡಾ ಕಾರ್ಖಾನೆಯಲ್ಲಿಯೇ ಗ್ಯಾಲಕ್ಸಿ ಝಡ್ ಫೋಲ್ಡ್ 6 ಮತ್ತು ಝಡ್ ಫ್ಲಿಪ್ 6 ಸ್ಮಾರ್ಟ್ಫೋನ್ಗಳನ್ನು ತಯಾರಿಸಲಾಗುತ್ತಿರುವುದು ಗಮನಾರ್ಹ. ಹೊಸ ಫೋಲ್ಡಬಲ್ ಗಳು ಅತ್ಯಂತ ತೆಳುವಾದ ಮತ್ತು ಹಗುರವಾದ ಗ್ಯಾಲಕ್ಸಿ ಝಡ್ ಸರಣಿಯ ಸಾಧನಗಳಾಗಿವೆ ಮತ್ತು ನೇರ ಅಂಚುಗಳೊಂದಿಗೆ ಸಂಪೂರ್ಣವಾಗಿ ಸಿಮೆಟ್ರಿಕಲ್ ವಿನ್ಯಾಸ ಹೊಂದಿವೆ. ಗ್ಯಾಲಕ್ಸಿ ಝಡ್ ಸರಣಿಯು ವರ್ಧಿತ ಆರ್ಮರ್ ಅಲ್ಯೂಮಿನಿಯಂ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಅನ್ನು ಸಹ ಹೊಂದಿದೆ. ಇದು ಅತಿ ಹೆಚ್ಚು ಬಾಳಿಕೆ ಬರುವ ಗ್ಯಾಲಕ್ಸಿ ಝಡ್ ಸರಣಿಯಾಗಿದೆ.