ನವದೆಹಲಿ: ಭಾರತದಲ್ಲಿನ ಕನಿಷ್ಠ 27 ಸ್ಟಾರ್ಟ್ಅಪ್ ಕಂಪನಿಗಳು ಈ ವಾರ ಸುಮಾರು 307.8 ಮಿಲಿಯನ್ ಡಾಲರ್ (ಸುಮಾರು 2 ಸಾವಿರದ 547 ಕೋಟಿ ರೂಪಾಯಿ) ಫಂಡಿಂಗ್ ಸಂಗ್ರಹಿಸಿವೆ. ಇದರಲ್ಲಿ 17 ಆರಂಭಿಕ ಹಂತದ ಮತ್ತು 7 ಬೆಳವಣಿಗೆಯ ಹಂತದ ಕಂಪನಿಗಳು ಸೇರಿವೆ. ಸುಮಾರು 32 ಆರಂಭಿಕ ಮತ್ತು ಬೆಳವಣಿಗೆಯ ಹಂತದ ಸ್ಟಾರ್ಟ್ಅಪ್ಗಳು ಕಳೆದ ವಾರ 384 ಮಿಲಿಯನ್ ಡಾಲರ್ಗಿಂತ ಹೆಚ್ಚು ಫಂಡಿಂಗ್ ಸಂಗ್ರಹಿಸಿವೆ ಎಂದು ಸ್ಟಾರ್ಟ್ಅಪ್ ಸುದ್ದಿ ಪೋರ್ಟಲ್ ಎನ್ ಟ್ರಾಕರ್ ಶನಿವಾರ ವರದಿ ಮಾಡಿದೆ.
ಎಂ ಪಾಕೆಟ್ (mPokket), ಎಮಾ (Ema), ಹುಂಚ್ (Hunch) ಮತ್ತು ರೋಜಾನಾ (Rozana) ಸೇರಿದಂತೆ ಹದಿನೇಳು ಆರಂಭಿಕ ಹಂತದ ಸ್ಟಾರ್ಟ್ಅಪ್ಗಳು ಸುಮಾರು 166.8 ಮಿಲಿಯನ್ ಡಾಲರ್ ಫಂಡಿಂಗ್ ಪಡೆದುಕೊಂಡಿವೆ. ದೆಹಲಿ-ಎನ್ಸಿಆರ್ ಮೂಲದ ಸ್ಟಾರ್ಟ್ಅಪ್ಗಳು 10 ಡೀಲ್ಗಳೊಂದಿಗೆ ಫಂಡಿಂಗ್ನಲ್ಲಿ ಅಗ್ರಸ್ಥಾನದಲ್ಲಿದ್ದರೆ, ಬೆಂಗಳೂರು 9 ಡೀಲ್ಗಳೊಂದಿಗೆ ನಂತರದ ಸ್ಥಾನದಲ್ಲಿದೆ.
ಸಾಲ ನೀಡುವ ಡಿಜಿಟಲ್ ಪ್ಲಾಟ್ಫಾರ್ಮ್ ಆಗಿರುವ ಎಂ ಪಾಕೆಟ್ ಬಿಪಿಇಎ ಕ್ರೆಡಿಟ್ನ ಖಾಸಗಿ ಕ್ರೆಡಿಟ್ ಪ್ಲಾಟ್ಫಾರ್ಮ್ನಿಂದ 500 ಕೋಟಿ ರೂ. (ಸುಮಾರು 60 ಮಿಲಿಯನ್ ಡಾಲರ್) ಸಾಲ ನಿಧಿ ಸಂಗ್ರಹಿಸಿದೆ. ತನ್ನ 24 ಮಿಲಿಯನ್ ನೋಂದಾಯಿತ ಗ್ರಾಹಕರಿಂದ ಹೆಚ್ಚುತ್ತಿರುವ ಸಾಲದ ಬೇಡಿಕೆಯನ್ನು ಪೂರೈಸಲು ಈ ಹಣವನ್ನು ಬಳಸಲಾಗುವುದು ಮತ್ತು ಅದೇ ಸಮಯದಲ್ಲಿ ಉದ್ಯೋಗ ಸೃಷ್ಟಿ ಮತ್ತು ತನ್ನ ವಿಮಾ ವಲಯದಲ್ಲಿನ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ನಿಧಿಯನ್ನು ವಿನಿಯೋಗಿಸಲಾಗುವುದು ಎಂದು ಎಂ ಪಾಕೆಟ್ ಹೇಳಿದೆ.