ಟಿ.ನರಸೀಪುರದಲ್ಲಿ ಕುಂಭಮೇಳ: ತ್ರಿವೇಣಿ ಸಂಗಮದಲ್ಲಿ ವೈಭವದ ದೀಪಾರತಿ- ವಿಡಿಯೋ - DEEPARATI
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/12-02-2025/640-480-23526475-thumbnail-16x9-meeg.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Feb 12, 2025, 3:56 PM IST
ಮೈಸೂರು: ಮೈಸೂರಿನ ಟಿ.ನರಸೀಪುರ ತಾಲ್ಲೂಕಿನ ತಿರುಮಲಕೂಡಲು ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಕುಂಭಮೇಳದ ಎರಡನೇ ದಿನವಾದ ಮಂಗಳವಾರ ರಾತ್ರಿ ವಾರಾಣಾಸಿಯ ಗಂಗಾರತಿ ಮಾದರಿಯಲ್ಲಿ ವೈಭವದಿಂದ ಸಾಂಪ್ರದಾಯಿಕವಾಗಿ ದೀಪಾರತಿ ನಡೆಯಿತು. ಅಗಸ್ತ್ಯೇಶ್ವರ ಸ್ವಾಮಿಯ ಸ್ನಾನಘಟ್ಟದ ಮುಂಭಾಗ ನಿರ್ಮಿಸಿರುವ ವೇದಿಕೆಯಲ್ಲಿ ಆರತಿ ನೆರವೇರಿತು.
ವಾರಾಣಾಸಿಯಿಂದ ಆಗಮಿಸಿದ್ದ ತಂಡ ಗಂಗಾಪೂಜೆ ಹಾಗೂ ದೀಪಾರತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿತು. ಓಂಕಾರದ ಮೂಲಕ ಕಾವೇರಿ ಆರತಿಗೆ ಚಾಲನೆ ದೊರೆತ ನಂತರ ಧೂಪಾರತಿ ಮಾಡಿದ ಒಂಬತ್ತು ಅರ್ಚಕರು, ಗಂಟೆ ಬಾರಿಸುತ್ತಾ, ಚಾಮರ ಬೀಸುತ್ತಾ, ಜೀವನದಿ ತಾಯಿ ಕಾವೇರಿ, ಅವಳ ಸೋದರಿ ಕಪಿಲೆ ಹಾಗೂ ಗುಪ್ತಗಾಮಿನಿ ಸ್ಫಟಿಕ ನದಿಗೆ ಗಂಗಾಪೂಜೆ ಹಾಗೂ ದೀಪಾರತಿ ಬೆಳಗಿದರು. ಅಪೂರ್ವ ದೃಶ್ಯವನ್ಮು ಸಾವಿರಾರು ಭಕ್ತರು ಕಣ್ತುಂಬಿಕೊಂಡರು.
ಬೆಳಕಿನ ಬೆರಗು: ಸರಸ್ವತಿ, ದುರ್ಗೆ, ಲಕ್ಷ್ಮಿ ಹಾಗೂ ಗಂಗೆಗೆ ನಮಿಸಿ ಮೂರು ಬಾರಿ ಕಾವೇರಿಗೆ ಆರತಿ ಮಾಡಲಾಯಿತು. ಇದಕ್ಕೆ ಕಾಲಭೈರವ, ರುದ್ರ ಶ್ಲೋಕ ಗೀತೆ ಹಿಮ್ಮೇಳವಾಗಿ ತೇಲಿಬಂತು. ಬಳಿಕ ಸ್ವಾಮೀಜಿಗಳು ಆರತಿ ಸ್ವೀಕರಿಸಿದರು. ಏಕಕಾಲಕ್ಕೆ ಸಂಗಮದಲ್ಲಿ ದೀಪಗಳ ಬೆಳಕು ಬೆರಗು ಮೂಡಿಸಿತು. ನೀರಿನಲ್ಲಿ ಜ್ಯೋತಿಯ ಪ್ರತಿಬಿಂಬ ಕಂಡು ಭಕ್ತರು ಪುಳಕಿತರಾದರು. ಗಂಗೆಯನ್ನು ಸ್ತುತಿಸುವ ಗೀತೆಗಳು ಮೊಳಗುತ್ತಲೇ, ದೀಪಾರತಿ ಮುಗಿಯುತ್ತಿದ್ದಂತೆ ಆಗಸದಲ್ಲಿ ಬಾಣಬಿರುಸು ಚಿತ್ತಾರ ನೋಡುಗರನ್ನು ಆಕರ್ಷಿಸಿತು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮೈಸೂರು ಶಾಖಾಮಠದ ಸೋಮೇಶ್ವರನಾಥ ಸ್ವಾಮೀಜಿ, ಕಾಗಿನೆಲೆ ಶಾಖಾಮಠದ ಶಿವಾನಂದಪುರಿ ಸ್ವಾಮೀಜಿ, ತಿರುಚಿ ಸಂಸ್ಥಾನ ಮಠದ ಜಯೇಂದ್ರತೀರ್ಥಪುರಿ ಸ್ವಾಮೀಜಿ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇದ್ದರು.
ತಡರಾತ್ರಿ ಆಗಮಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ತ್ರಿವೇಣಿ ಸಂಗಮದ ಗುಂಜಾ ನರಸಿಂಹ ದೇಗುಲದ ಬಳಿ ಸ್ನಾನ ಮಾಡಿ, ಗಂಗಾ ಪೂಜೆ ಹಾಗೂ ದೀಪಾರತಿ ನೆರವೇರಿಸಿದರು.
ಇದನ್ನೂ ನೋಡಿ: ಸಿದ್ದಾಪುರದಲ್ಲೊಂದು ಸಂಪ್ರದಾಯ ತೆರೆದಿಟ್ಟ ಸರಳ ವಿವಾಹ