ಬೆಂಗಳೂರು: ಲ್ಯಾಮ್ ರಿಸರ್ಚ್ ಮುಂದಿನ ಕೆಲವು ವರ್ಷಗಳಲ್ಲಿ ಕರ್ನಾಟಕದಲ್ಲಿ 10 ಸಾವಿರ ಕೋಟಿ ರೂ. ಹೂಡಿಕೆ ಮಾಡಲಿದೆ. ಇನ್ವೆಸ್ಟ್ ಕರ್ನಾಟಕ 2025 ಜಾಗತಿಕ ಸಮಾವೇಶದಲ್ಲಿ ಲ್ಯಾಮ್ ರಿಸರ್ಚ್‌ನ ಗ್ಲೋಬಲ್ ಪ್ರಾಡಕ್ಟ್ಸ್ ಗ್ರೂಪ್‌ನ ಹಿರಿಯ ಉಪಾಧ್ಯಕ್ಷ ಶೇಷಾ ವರದರಾಜನ್ ಈ ಘೋಷಣೆ ಮಾಡಿದ್ದಾರೆ.
ಲ್ಯಾಮ್ ರಿಸರ್ಚ್ ಒಂದು ಅಮೆರಿಕನ್ ಕಂಪನಿಯಾಗಿದ್ದು, ಅದು ಸೆಮಿಕಂಡಕ್ಟರ್ ಉತ್ಪಾದನೆಗೆ ಅಗತ್ಯವಾದ ಸಾಧನಗಳನ್ನು ಅಭಿವೃದ್ಧಿಪಡಿಸುತ್ತದೆ. ಈ ಉಪಕರಣಗಳನ್ನು ವೇಫರ್ ಸಂಸ್ಕರಣೆ ಮತ್ತು ಸೆಮಿಕಂಡಕ್ಟರ್ ಸಾಧನಗಳ ವೈರಿಂಗ್ನಲ್ಲಿ ಬಳಸಲಾಗುತ್ತದೆ.
ಈ ಘೋಷಣೆ ಮತ್ತು ಹೂಡಿಕೆಯು ಕರ್ನಾಟಕದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಗೆ ಒಂದು ದೊಡ್ಡ ಸೇರ್ಪಡೆಯಾಗಿದೆ. ಇದು ಈ ಕ್ಷೇತ್ರಗಳಲ್ಲಿನ ಕರ್ನಾಟಕದ ವಿಶ್ವಾಸ ಮತ್ತು ಸಾಮರ್ಥ್ಯವನ್ನು ತೋರಿಸುತ್ತದೆ. ಯೋಜಿತ ಹೂಡಿಕೆಗಾಗಿ ಕೆಐಎಡಿಬಿ ಒಡೆತನದ ಜಮೀನನ್ನು ಮೀಸಲಿಡಲು ಲ್ಯಾಮ್ ರಿಸರ್ಚ್ ಕರ್ನಾಟಕ ಸರ್ಕಾರದೊಂದಿಗೆ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದೆ.
ಫ್ಯೂಚರ್ ಆಫ್ ಇನ್ನೋವೇಶನ್ ಎಕ್ಸ್-ಪೋಗೆ ಚಾಲನೆ: ಇದೇ ವೇಳೆ, ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಯುವಜನರ ಗಮನ ಸೆಳೆಯುತ್ತಿರುವುದೆಂದರೆ, ನಾಳಿನ ನಮ್ಮ ಜಗತ್ತಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ನಾವೀನ್ಯತೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಏರ್ಪಡಿಸಿರುವ 'ಫ್ಯೂಚರ್ ಆಫ್ ಇನ್ನೋವೇಶನ್' ಎಕ್ಸ್-ಪೋಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಜತೆಯಾಗಿ ಬುಧವಾರ ಚಾಲನೆ ನೀಡಿದರು.
ಬಳಿಕ ಶಿವಕುಮಾರ್ ಮತ್ತು ಎಂ.ಬಿ.ಪಾಟೀಲ್ ಇಬ್ಬರೂ ಕರ್ನಾಟಕ ಪೆವಿಲಿಯನ್, ಟೊಯೋಟಾ, ಎಂಬೆಸಿ ಗ್ರೂಪ್, ರಾಜ್ಯ ಪ್ರವಾಸೋದ್ಯಮ, ಡ್ರೋನ್ ತಂತ್ರಜ್ಞಾನದ ವೈಶಿಷ್ಟ್ಯಪೂರ್ಣ ಮಜಲುಗಳನ್ನು ಕುತೂಹಲದಿಂದ ವೀಕ್ಷಿಸಿ, ಅವುಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಜೊತೆಗೆ, ಕೃಷಿ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಹೊತ್ತು ತರಲಿವೆ ಎನ್ನಲಾಗುತ್ತಿರುವ ಅಗ್ರಿ-ಟೆಕ್ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ರೋಗ ಪತ್ತೆ ಮತ್ತು ಚಿಕಿತ್ಸೆಗಳನ್ನು ಸುಲಭವಾಗಿಸುವ ಆರೋಗ್ಯ ಸೇವೆಗಳ ತಂತ್ರಜ್ಞಾನಗಳ ಬಗ್ಗೆಯೂ ಅವರು ತಿಳಿದುಕೊಂಡರು.
ಎಕ್ಸ್-ಪೋ ಕುರಿತು ಮಾತನಾಡಿದ ಸಚಿವ ಎಂ.ಬಿ.ಪಾಟೀಲ್, ''ಇದರಲ್ಲಿ 40ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿವೆ. ಈ ಪೈಕಿ ಜಾಗತಿಕ ಮಟ್ಟದ ಕಂಪನಿಗಳು ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ನವೋದ್ಯಮಗಳೆರಡೂ ಇವೆ. ಡ್ರೋನ್, ಬಾಹ್ಯಾಕಾಶ, ಕೃಷಿ, ಆರೋಗ್ಯ, ಉತ್ಪಾದನಾ ವಲಯ, ವೈಮಾಂತರಿಕ್ಷ, ರಕ್ಷಣೆ ಮುಂತಾದ ಕ್ಷೇತ್ರಗಳಲ್ಲಿ ಮುಂಚೂಣಿಗೆ ಬರುತ್ತಿರುವ ಆಧುನಿಕ ತಂತ್ರಜ್ಞಾನ ಧಾರೆಗಳನ್ನು ಇಲ್ಲಿ ನೋಡಬಹುದು'' ಎಂದರು.
ಮುಖ್ಯವಾಗಿ ಇಲ್ಲಿ ಮರುಬಳಕೆ ಇಂಧನ, ಸೆಮಿಕಂಡಕ್ಟರ್, ವಿದ್ಯುಚ್ಚಾಲಿತ ವಾಹನಗಳು ಮತ್ತು ಸುಸ್ಥಿರ ಉತ್ಪಾದನೆಗೆ ಹೆಸರಾದ ಕಂಪನಿಗಳು ಪಾಲ್ಗೊಂಡಿವೆ. ಜೊತೆಗೆ, ರಾಜ್ಯದ ಸಾಧನೆಗಳನ್ನು ಬಿಂಬಿಸುವ ಪ್ರತ್ಯೇಕ 'ಕರ್ನಾಟಕ ಪೆವಿಲಿಯನ್' ಕೂಡ ಇದೆ. ಪಾಲ್ಗೊಂಡಿರುವ ಕಂಪನಿಗಳಲ್ಲಿ ಜಿ.ಇ.ಹೆಲ್ತ್ ಕೇರ್, ಹೀರೋ ಫ್ಯೂಚರ್ ಎನರ್ಜೀಸ್, ರಿವರ್ ಮೊಬಿಲಿಟಿ, ಸರಳಾ ಏವಿಯೇಶನ್, ಗೆಲಾಕ್ಸಿ ಸ್ಪೇಸ್, ಲ್ಯಾಮ್ ರೀಸರ್ಚ್ ಪ್ರಮುಖವಾಗಿವೆ. ಕರ್ನಾಟಕ ಪೆವಿಲಿಯನ್ನಲ್ಲಿ ಕ್ವಿನ್ ಸಿಟಿ, ಫ್ಲೈಯಿಂಗ್ ವೆಡ್ಜ್, ಬೆಲ್ಲಾಟ್ರಿಕ್ಸ್, ಸ್ಕೀಸರ್ವ್, ಫ್ಲಕ್ಸ್ ಆಟೋ ಮುಂತಾದ ಉದ್ಯಮಗಳಿವೆ.
ಇದನ್ನೂ ಓದಿ: HAL ನಿರ್ಮಿತ ಲಘು ಯುದ್ಧ ಹೆಲಿಕಾಪ್ಟರ್ಗೆ ಹೆಚ್ಚಿದ ಬೇಡಿಕೆ: ಮುಂದಿನ ಆರು ತಿಂಗಳಲ್ಲಿ 2.5 ಲಕ್ಷ ಕೋಟಿ ವಹಿವಾಟು