ಶಿವಮೊಗ್ಗ:ಸಿಡಿಲು ಬಡಿದು ಯುವ ರೈತನೊಬ್ಬ ಮೃತಪಟ್ಟು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿವಮೊಗ್ಗ ತಾಲೂಕು ಹರಮಘಟ್ಟ ಗ್ರಾಮದಲ್ಲಿ ನಡೆದಿದೆ. ಶುಕ್ರವಾರ ಸಂಜೆ 6 ಗಂಟೆ ಸುಮಾರು ಹರಮಘಟ್ಟದಲ್ಲಿ ಭಾರಿ ಗಾಳಿ, ಸಿಡಿಲು ಸಹಿತ ಮಳೆ ಸುರಿದಿದೆ. ಈ ವೇಳೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರಾಕೇಶ್ (28) ಎಂಬುವರಿಗೆ ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ರಾಕೇಶ್ ಜೊತೆ ಆತನ ಸ್ನೇಹಿತ ರುದ್ರೇಶ್ ಕೂಡ ಇದ್ದ. ಇವರಿಗೂ ಸಿಡಿಲು ತಾಗಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದೇ ದಾರಿಯಲ್ಲಿ ಕುರಿ ಮೇಯಿಸಿಕೊಂಡು ಬರುತ್ತಿದ್ದ ಕುರಿಗಾಯಿಗಳಿಂದ ರಾಕೇಶ್ ಮೃತಟ್ಟಿದ್ದು ಮತ್ತು ರುದ್ರೇಶ್ ಗಾಯಗೊಂಡಿರುವ ವಿಷಯ ತಿಳಿದು ಬಂದಿದೆ. ದೃಶ್ಯ ಕಂಡ ತಕ್ಷಣ ಕುರಿಗಾಯಿಗಳು ಈ ವಿಷಯವನ್ನು ಗ್ರಾಮಕ್ಕೆ ತಲುಪಿಸಿದ್ದಾರೆ. ಕೂಡಲೇ ಗ್ರಾಮಸ್ಥರು ಹೊಲಕ್ಕೆ ತೆರಳಿದಾಗ ಸಾವಿನ ವಿಚಾರ ತಿಳಿದು ಬಂದಿದೆ. ಸದ್ಯ ರಾಕೇಶ್ ಶವವನ್ನು ಶಿವಮೊಗ್ಗಕ್ಕೆ ರವಾನೆ ಮಾಡಲಾಗಿದೆ. ರುದ್ರೇಶನನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.