ಬೆಂಗಳೂರು: ಬಾರ್ಡರ್-ಗವಾಸ್ಕರ್ ಟೆಸ್ಟ್ ಕ್ರಿಕೆಟ್ ಸರಣಿಯ ಭಾಗವಾಗಿದ್ದ ಕನ್ನಡಿಗರಾದ ಪ್ರಸಿದ್ಧ್ ಕೃಷ್ಣ ಹಾಗೂ ದೇವದತ್ ಪಡಿಕ್ಕಲ್ ಭಾರತಕ್ಕೆ ಆಗಮಿಸಿದ್ದು, ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ಮುಂದಿನ ಪಂದ್ಯಗಳಿಗೆ ಕರ್ನಾಟಕ ತಂಡ ಸೇರ್ಪಡೆಗೊಂಡಿದ್ದಾರೆ.
ಜನವರಿ 11ರಿಂದ ಆರಂಭವಾಗಲಿರುವ ವಿಜಯ್ ಹಜಾರೆ ಟ್ರೋಫಿಯ ಕ್ವಾರ್ಟರ್ ಫೈನಲ್ ಸೇರಿದಂತೆ ಮುಂದಿನ ಪಂದ್ಯಗಳಿಗೆ ತಂಡವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಪ್ರಕಟಿಸಿದೆ.
ಪ್ರಸಿದ್ಧ್ ಕೃಷ್ಣ, ದೇವದತ್ ಪಡಿಕ್ಕಲ್, ಹಾರ್ದಿಕ್ ರಾಜ್ ಹಾಗೂ ಯಶೋವರ್ಧನ್ ಪರಂತಾಪ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಪ್ರಸಿದ್ಧ್ ಕೃಷ್ಣ ಹಾಗೂ ಅನುಭವಿ ದೇವದತ್ ಪಡಿಕ್ಕಲ್ ಆಗಮನ ಕರ್ನಾಟಕ ತಂಡದ ಬಲ ಹೆಚ್ಚಿಸಿತ್ತು.
ಕರ್ನಾಟಕ ತಂಡ ಹೀಗಿದೆ: ಮಯಾಂಕ್ ಅಗರ್ವಾಲ್, ಪ್ರಸಿದ್ಧ್ ಕೃಷ್ಣ, ದೇವದತ್ ಪಡಿಕ್ಕಲ್, ಶ್ರೇಯಸ್ ಗೋಪಾಲ್, ಕೆ.ಎಲ್.ಶ್ರೀಜಿತ್, ಅಭಿನವ್ ಮನೋಹರ್, ಹಾರ್ದಿಕ್ ರಾಜ್, ಕೌಶಿಕ್.ವಿ, ವಿದ್ಯಾಧರ್ ಪಾಟೀಲ್, ಅಭಿಲಾಷ್ ಶೆಟ್ಟಿ, ಸ್ಮರಣ್.ಆರ್, ಲವನೀತ್ ಸಿಸೋಡಿಯಾ, ಯಶೋವರ್ಧನ್ ಪರಂತಾಪ್, ಪ್ರವೀಣ್ ದುಬೆ, ನಿಕಿನ್ ಜೋಸ್, ಅನೀಶ್.ಕೆ.ವಿ
ಜ.11ರಂದು ವಡೋದರದಲ್ಲಿ ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಬರೋಡಾವನ್ನು ಎದುರಿಸಲಿದೆ.
ಆಸ್ಟ್ರೇಲಿಯಾ ವಿರುದ್ಧ ಪ್ರಸಿದ್ಧ್ ಕೃಷ್ಣ ಪ್ರದರ್ಶನ ಹೇಗಿತ್ತು?: ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತ ಸೋಲನುಭವಿಸಿತ್ತು. ಕೇವಲ ಒಂದು ಟೆಸ್ಟ್ ಪಂದ್ಯವನ್ನಷ್ಟೇ ಗೆದ್ದುಕೊಂಡಿದ್ದ ಭಾರತ 3 ಪಂದ್ಯಗಳಲ್ಲಿ ಹಿನ್ನಡೆ ಅನುಭವಿಸಿತ್ತು. ಆದ್ರೆ ಈ ಸರಣಿಯ ಅಂತಿಮ ಪಂದ್ಯದಲ್ಲಿ ಕರ್ನಾಟಕದ ಯುವ ಬೌಲರ್ ಪ್ರಸಿದ್ಧ್ ಕೃಷ್ಣ ಉತ್ತಮ ಪ್ರದರ್ಶನ ನೀಡಿದ್ದರು. ಕೊನೆಯ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದರು. ಎರಡೂ ಇನ್ನಿಂಗ್ಸ್ ಸೇರಿಸಿ 6 ವಿಕೆಟ್ಗಳನ್ನು ಉರುಳಿಸಿದ್ದರು.
ಇದನ್ನೂ ಓದಿ: ಆಸೀಸ್ ವಿರುದ್ಧ ಒಂದೇ ಒಂದು ಪಂದ್ಯ ಆಡದೇ ಕೋಟಿಗಟ್ಟಲೆ ಹಣ ಸಂಪಾದಿಸಿದ ಯುವ ಕ್ರಿಕೆಟರ್!