ಹಾವೇರಿ:ಜಿಲ್ಲೆಯ ಹಿರೇಕೆರೂರು ತಾಲೂಕಿನ ನೀಡನೇಗಿಲು ಗ್ರಾಮದ ಯುವ ರೈತ ಹನುಮಂತಪ್ಪ ದೊಡ್ಡೇರಿ ಎಂಬವರು ಸೇವಂತಿ ಪುಷ್ಪ ಕೃಷಿಯಲ್ಲಿ ಯಶಸ್ವಿಯಾಗಿದ್ದಾರೆ. ಕೃಷಿಯಲ್ಲಿ ಏನಾದರೂ ಹೊಸತನ ತರಬೇಕು ಎಂಬುದು ಇವರ ಹಂಬಲವಾಗಿತ್ತು. ಇದಕ್ಕಾಗಿ ಸಾಕಷ್ಟು ಕೃಷಿ ವಿವಿಗಳಿಗೆ ಭೇಟಿ ನೀಡಿ ವಿವರವಾದ ಮಾಹಿತಿ ಪಡೆದಿದ್ದಾರೆ. ಕೆಲವು ವಿವಿಗಳಲ್ಲಿ ತರಬೇತಿಯನ್ನೂ ಪಡೆದು ಅದನ್ನು ತಮ್ಮ ಜಮೀನಿನಲ್ಲಿ ಅಳವಡಿಸಿಕೊಂಡಿದ್ದಾರೆ.
ಹನುಮಂತಪ್ಪನವರನ್ನು ಹೆಚ್ಚು ಆಕರ್ಷಿಸಿದ್ದು ಸ್ಮಾರ್ಟ್ ಅಗ್ರಿ. ಅದರಲ್ಲೂ ಪುಷ್ಪ ಕೃಷಿಯತ್ತ ಚಿತ್ತ ಹೊರಳಿಸಿರುವ ಇವರು ಸೇವಂತಿ ಹೂ ಬೆಳೆದು ಇದೀಗ ಕೈ ತುಂಬ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ತಮ್ಮ 30 ಗುಂಟೆ ಜಮೀನಿನಲ್ಲಿ ಸೇಂಟ್ ಯೆಲ್ಲೋ ತಳಿಯ ಸೇವಂತಿ ಕೃಷಿ ಮಾಡಿದ್ದಾರೆ. ಗಿಡದಿಂದ ಹೂ ಕಟಾವ್ ಮಾಡಿದ ನಂತರ ಸುಮಾರು ನಾಲ್ಕು ದಿನಗಳ ಕಾಲ ಬಾಡದೇ ಇರುವುದು ಈ ತಳಿಯ ವಿಶೇಷತೆ. ಹೀಗಾಗಿ ಸೇಂಟ್ ಯೆಲ್ಲೋ ಸೇವಂತಿಗೆ ಹೆಚ್ಚು ಬೇಡಿಕೆಯಿದೆ. ಚಿಕ್ಕಬಳ್ಳಾಪುರದ ಲೈಟಿಂಗ್ ಕೃಷಿ ಬಗ್ಗೆ ಹೆಚ್ಚು ಗಮನ ಹರಿಸಿದ ಹನುಮಂತಪ್ಪ, ಅಕ್ಟೋಬರ್ ತಿಂಗಳಲ್ಲಿ ಸೇವಂತಿ ಬೆಳೆದಿದ್ದಾರೆ.
ಕೃತಕ ಬೆಳಕಿನ ವ್ಯವಸ್ಥೆಯಲ್ಲಿ ಸೇವಂತಿ ಕೃಷಿ: ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಬೆಳೆಯುವ ಸೇವಂತಿಯ ಈ ತಳಿಗೆ ಕೃತಕ ಹಗಲು ಬೇಕು. ಸೇವಂತಿ ಸಸಿ ನಾಟಿ ಮಾಡಿದ ನಂತರ ಸುಮಾರು 40 ದಿನಗಳ ಕಾಲ ಈ ಸಸಿಗಳಿಗೆ ದಿನಕ್ಕೆ ನಾಲ್ಕು ಗಂಟೆ ಲೈಟಿಂಗ್ ಮಾಡಬೇಕು. ಜಮೀನಿನಲ್ಲಿ ಕೃತಕವಾಗಿ ಹಗಲು ಸೃಷ್ಟಿಸಿ ಬೆಳಕಿನ ವ್ಯವಸ್ಥೆ ಮಾಡಲಾಗುತ್ತದೆ. ಹನುಮಂತಪ್ಪ ತಮ್ಮ 30 ಗುಂಟೆ ಜಮೀನಿನ ಸೇವಂತಿಗೆ ಸುಮಾರು 140 ಲೈಟ್‌ಗಳ ವ್ಯವಸ್ಥೆ ಮಾಡಿ ಕೃತಕ ಹಗಲಿನ ವಾತಾವರವಣ ಸೃಷ್ಟಿಸಿದ್ದಾರೆ. ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ರಾತ್ರಿ ಹೆಚ್ಚು ಮತ್ತು ಹಗಲು ಕಡಿಮೆ ಇರುತ್ತದೆ. ಹೀಗಾಗಿ ಕೃತಕ ಹಗಲಿನ ವಾತಾವರಣ ಅವಶ್ಯಕತೆ ಇದೆ ಎನ್ನುತ್ತಾರೆ ಹನುಮಂತಪ್ಪ.
ಈ ದಿನಗಳಲ್ಲಿ ದಿನಕ್ಕೆ ರಾತ್ರಿ ಐದು ಗಂಟೆಗಳ ಕಾಲ ಕೃತಕ ಹಗಲು ಸೃಷ್ಟಿಸುವುದರಿಂದ ಸೇವಂತಿ ಸಸಿಗಳು ಹೆಚ್ಚೆಚ್ಚು ಟಿಸಿಲೊಡೆಯುತ್ತವೆ. ಹೆಚ್ಚು ಟಿಸಿಲುಗಳಾಗುವುದರಿಂದ ಅತ್ಯಧಿಕ ಮೊಗ್ಗುಗಳು ಬರುತ್ತವೆ. ಅಲ್ಲದೇ ಹೆಚ್ಚೆಚ್ಚು ಪುಷ್ಪಗಳು ಅರಳುತ್ತವೆ. ಇದರ ಜೊತೆಗೆ ಪುಷ್ಪಗಳ ಗಾತ್ರವೂ ಸಹ ಹೆಚ್ಚುತ್ತಿದ್ದು ಅಧಿಕ ಲಾಭ ಪಡೆಯಬಹುದು. ಕೃತಕ ಬೆಳಕಿನ ವ್ಯವಸ್ಥೆಯಿಲ್ಲದೆ ಒಂದು ಸೇವಂತಿ ಗಿಡದಿಂದ 500 ಗ್ರಾಂ ಪುಷ್ಪ ಪಡೆಯಬಹುದು. ಆದರೆ ಲೈಟಿಂಗ್ ಮೂಲಕ ಬೆಳೆದರೆ ಒಂದು ಗಿಡದಿಂದ ಎರಡು ಕೆ.ಜಿಯವರೆಗೆ ಬೆಳೆ ತೆಗೆಯಬಹುದು ಎಂದು ಹನುಮಂತಪ್ಪ ಮಾಹಿತಿ ನೀಡಿದರು.