ಮೈಸೂರು : ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಚುನಾವಣೆ ಮಾಡುತ್ತೇವೆ ಎಂದು ಹೇಳುವ ಮೂಲಕ ಬಿಜೆಪಿ ಅಭ್ಯರ್ಥಿಯಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ಕಾಂಗ್ರೆಸ್ ಪಕ್ಷದ ಒಕ್ಕಲಿಗ ಅಸ್ತ್ರಕ್ಕೆ ತಿರುಗೇಟು ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಸಮಾಜವನ್ನು ಒಗ್ಗೂಡಿಸಿ ದೇಶದ ಒಳಿತಿಗೆ ಕೆಲಸ ಮಾಡುತ್ತೇವೆ. ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲರೂ ಪ್ರೀತಿಯಿಂದ ಮಾತನಾಡಿಸುತ್ತಿದ್ದಾರೆ. ಮುಂದಿನ ಹಂತದ ಪ್ರಚಾರದಲ್ಲಿ ಜೆಡಿಎಸ್ ನವರು ಸಹ ನಮ್ಮೊಟ್ಟಿಗೆ ಬರಲಿದ್ದಾರೆ. ಚುನಾವಣಾ ಪ್ರಚಾರದ ಬಗ್ಗೆ ಎಲ್ಲಾ ತೀರ್ಮಾನವನ್ನು ಪಕ್ಷ ನಿರ್ಧರಿಸಲಿದೆ ಎಂದರು.
ಗ್ರೌಂಡ್ ಲೆವೆಲ್‌ಗೆ ಇಳಿದು ಪ್ರಚಾರ ಮಾಡುತ್ತಿರುವುದರಿಂದ, ಜನಸಾಮಾನ್ಯರ ಕಷ್ಟಗಳನ್ನು ಹತ್ತಿರದಿಂದ ನೋಡಿದಂತಾಗಿದೆ. ಗ್ರೌಂಡ್ ಲೆವಲ್‌ಗೆ ಇಳಿದು ಪ್ರಚಾರ ಮಾಡುತ್ತಿರುವುದರಿಂದ, ಜನರ ಕಷ್ಟ ತಿಳಿದುಕೊಳ್ಳಬಹುದು. ಹುಣಸೂರು, ಪಿರಿಯಾಪಟ್ಟಣ, ಕೊಡಗು ಕಾಡಂಚಿನ ಪ್ರದೇಶದಲ್ಲಿ ಮಾವನ-ಪ್ರಾಣಿ ಸಂಘರ್ಷ ಹೆಚ್ಚಾಗಿದೆ ಎಂದು ತಿಳಿದುಕೊಂಡಿದ್ದೇನೆ ಎಂದು ತಿಳಿಸಿದರು.
ಸಾಮಾನ್ಯ ಜನರ ಎದುರು ಮಹಾರಾಜರು ಚುನಾವಣೆಗೆ ನಿಂತಿದ್ದಾರೆ ಎಂಬ ಕಾಂಗ್ರೆಸ್ ಅಭ್ಯರ್ಥಿ ಮಾತಿಗೆ ಪ್ರತಿಕ್ರಿಯೆ ನೀಡಿದ ಯದುವೀರ್, ಸಂವಿಧಾನದಲ್ಲಿ ರಾಜರು ಒಂದೇ, ಜನಸಾಮಾನ್ಯರು ಒಂದೇ. ಕಾನೂನಿನಲ್ಲಿ ಎಲ್ಲರಿಗೂ ಅವಕಾಶ ಇದೆ. ಒಳ್ಳೆಯ ಕೆಲಸ ಮಾಡಬೇಕು ಎಂದು ರಾಜಕೀಯಕ್ಕೆ ಬಂದಿದ್ದೇನೆ ಎಂದು ಹೇಳಿದರು. ಕುವೆಂಪುನಗರದ ಗಗನಚುಂಬಿ ಜೋಡಿ ರಸ್ತೆಯಲ್ಲಿ ಚುನಾವಣೆ ದೃಷ್ಟಿಯಿಂದ ನೂತನ ಕಚೇರಿಯನ್ನು ತೆರೆಯಲಾಗಿದೆ. ಈ ಕಚೇರಿ ಜನಸಾಮಾನ್ಯರ ಹಾಗೂ ಕಾರ್ಯಕರ್ತರ ಕಚೇರಿ ಆಗಿದೆ ಎಂದರು.
ಪ್ರತಾಪ್‌ಸಿಂಹಗಿಂತ ಉತ್ತಮ ಅಭ್ಯರ್ಥಿಯನ್ನ ಕಣಕ್ಕಿಳಿಸಿದ್ದೇವೆ : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಸಂಸದ ಪ್ರತಾಪ್ ಸಿಂಹ ಅವರಿಗಿಂತಲೂ ಉತ್ತಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ ಎಂದು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಹೇಳಿದರು.
ಯದುವೀರ್ ಅವರ ಕಚೇರಿ ಉದ್ಘಾಟನೆಯಲ್ಲಿ ಪಾಲ್ಗೊಂಡು, ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರಿನ ಅರಸರು ಅಪಾರ ಕೊಡುಗೆ ನೀಡಿದ್ದಾರೆ. ಅವರ ದೂರದೃಷ್ಟಿಯ ಫಲವಾಗಿ ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ಮೈಸೂರಿನ ಮಹಾರಾಜರು ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಇದೆಲ್ಲವನ್ನೂ ಪರಿಗಣಿಸಿ ರಾಜಮನೆತನದ ಯದುವೀರ್ಗೆ ಬಿಜೆಪಿ ಟಿಕೆಟ್ ನೀಡಿದ್ದೇವೆ ಎಂದರು.