ಚಿಕ್ಕಮಗಳೂರು :ಇಷ್ಟು ದಿನಗಳ ಕಾಲ ಮಲೆನಾಡು ಭಾಗ ಕಾಫಿ ತೋಟ ಹಾಗೂ ಕಾಡಂಚಿನ ತೋಟಗಳಿಗೆ ಭೇಟಿ ನೀಡುತ್ತಿದ್ದ ಕಾಡಾನೆಗಳು ಈಗ ನಗರ ಪ್ರದೇಶಗಳಿಗೆ ನುಗ್ಗಲು ಪ್ರಾರಂಭ ಮಾಡಿವೆ. ಈ ಘಟನೆಯಿಂದ ಸಾರ್ವಜನಿಕರು ಭಯಭೀತರಾಗಿದ್ದು, ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಚಿಕ್ಕಮಗಳೂರು ನಗರದಲ್ಲಿ ಕಾಣಿಸಿಕೊಂಡ ಕಾಡಾನೆ ನೋಡಿ ಸಾರ್ವಜನಿಕರು ಗಾಬರಿಯಾಗಿದ್ದಾರೆ. ನಗರದ ಜಯನಗರ ಬಡಾವಣೆಯಲ್ಲಿ ಒಂಟಿ ಸಲಗ ಯಾವುದೇ ಭಯವಿಲ್ಲದೇ ಸಂಚಾರ ನಡೆಸಿದ್ದು, ನಗರದಲ್ಲಿ ಇಡೀ ರಾತ್ರಿ ಒಂಟಿ ಸಲಗ ಬಿಂದಾಸ್ ಆಗಿ ಓಡಾಟ ನಡೆಸಿದೆ. ಜಯನಗರ ಬಡಾವಣೆ ನಿವಾಸಿಗಳಲ್ಲಿ ಕಾಡಾನೆ ಆತಂಕ ಒಂದು ಕಡೆ ಮನೆ ಮಾಡಿದರೆ, ಮೂರು ಮನೆ- ತೇಗೂರು ಗ್ರಾಮದ ಮಧ್ಯೆ ಒಂಟಿ ಸಲಗ ಪ್ರವೇಶ ಮಾಡಿ ಅಲ್ಲಿಯೂ ದಾಂಧಲೆ ಎಬ್ಬಿಸಿದೆ.
ಹಳ್ಳ ಹಾಗೂ ಗದ್ದೆ ಸಾಲಿನಲ್ಲಿ ಬೀಡುಬಿಟ್ಟಿರುವ ಒಂಟಿ ಸಲಗ ನೋಡಿ ರಸ್ತೆಯಲ್ಲಿ ಸಂಚಾರ ಮಾಡಲು ಸಾರ್ವಜನಿಕರು ಭಯಪಡುತ್ತಿದ್ದಾರೆ. ಕೋಟೆ, ಕೈಗಾರಿಕಾ ಪ್ರದೇಶ, ಮೂರು ಮನೆ, ತೇಗೂರು ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಸ್ಥಳೀಯರಿಂದ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಭೇಟಿ ನೀಡಿದ್ದಾರೆ.