ಬೆಂಗಳೂರು: ರಷ್ಯಾ ಉಕ್ರೇನ್ ಯುದ್ಧ, ಇಂಡೋ ಪೆಸಿಪಿಕ್ ಬಿಕ್ಕಟ್ಟು ಸೇರಿದಂತೆ ಜಾಗತಿಕವಾಗಿ ಎದುರಾಗಿದ್ದ ಎಲ್ಲ ಸಮಸ್ಯೆಗಳನ್ನೂ ಪ್ರಧಾನಿ ನರೇಂದ್ರ ಮೋದಿ ನಿಭಾಯಿಸಿದ್ದಾರೆ. ಇರಾನ್ ಇಸ್ರೇಲ್ ಯುದ್ಧ ಸೂಕ್ಷ್ಮ ವಿಚಾರವಾಗಿದೆ. ಈಗಾಗಲೇ ನಾವು ಎರಡು ದೇಶಗಳ ಜೊತೆ ಮಾತನಾಡಿದ್ದೇವೆ. ಆದಷ್ಟು ಬೇಗ ಭಾರತೀಯರನ್ನ ಇರಾನ್ ಬಿಡುಗಡೆ ಮಾಡುವ ಭರವಸೆ ಇದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ತಿಳಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತೀಯರಿದ್ದ ಹಡಗು ಇರಾನ್ ವಶದಲ್ಲಿದೆ. ದೇಶದೊಳಗಷ್ಟೇ ಅಲ್ಲ ಹೊರದೇಶದಲ್ಲೂ ಮೋದಿಯವರೇ ಗ್ಯಾರಂಟಿ, ನಿನ್ನೆ ಇರಾನ್ ಸರ್ಕಾರದ ಜೊತೆ ನಮ್ಮ ಭಾರತೀಯರ ಬಿಡುಗಡೆ ಬಗ್ಗೆ ಮಾತಾಡಿದ್ದೇನೆ. ಈ ನಿಟ್ಟಿನಲ್ಲಿ ಸಕಾರಾತ್ಮಕ ಮಾತುಕತೆ ನಡೆದಿದೆ, ನಮ್ಮ ವಿದೇಶಾಂಗ ಇಲಾಖೆ ಅಧಿಕಾರಿಗಳು ಇರಾನ್ ವಶದಲ್ಲಿರುವ ಭಾರತೀಯರ ಭೇಟಿ ಮಾಡಿದ್ದಾರೆ. ಇದು ನಮಗೆ ಸಮಾಧಾನ ತಂದಿರುವ ವಿಚಾರ, ಆದಷ್ಟು ಬೇಗ ಇರಾನ್ ಭಾರತೀಯರನ್ನ ಬಿಡುಗಡೆ ಮಾಡುವ ಭರವಸೆ ಇದೆ ಎಂದರು.
ಪಾಕ್ ಆಕ್ರಮಿತ ಕಾಶ್ಮೀರ ಭಾರತದ್ದು. ಪಿಒಪಿ ಹೇಗೆ ಆಯಿತು, ಆಗ ಯಾವ ಸರ್ಕಾರ ಇತ್ತು, ಯಾರು ತಪ್ಪು ಮಾಡಿದರು ಎಂದು ಎಲ್ಲರಿಗೂ ಗೊತ್ತು. ಇದನ್ನು ಮತ್ತೆ ನಾನು ಹೇಳಲ್ಲ, ಸಂಸತ್ನಲ್ಲೇ ಪಿಒಕೆ ವಿಚಾರದಲ್ಲಿ ಬಿಜೆಪಿಯ ನಿಲುವೇನು ಎಂದು ಹೇಳಿದ್ದೇವೆ, ಆದರೆ ಪಿಒಕೆ ವಿಚಾರ ಈಗ ಮತ್ತೆ ಚರ್ಚೆಗೆ ಬಂದಿದೆ. ದೇಶದ ಜನತೆಯ ಜಾಗೃತಿ ಬದಲಾಗಿದೆ, ರಾಷ್ಟ್ರೀಯತೆ ಬೆಳೆಯುತ್ತಿದೆ ಎಂದು ಅಭಿಪ್ರಾಯಪಟ್ಟರು.
ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಅನುಮಾನಾಸ್ಪದ ಸರಣಿ ಸಾವು ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಜೈಶಂಕರ್, ಇದು ನಮಗೆ ಹೆಚ್ಚಿನ ಆತಂಕ ಹುಟ್ಟಿಸಿದೆ. ಸರ್ಕಾರಕ್ಕೆ ಇದು ತುಂಬಾ ಕಳವಳ ತಂದಿದೆ. ಆ ವಿದ್ಯಾರ್ಥಿಗಳ ಕುಟುಂಬಳಿಗೆ ದುರಂತ ಈ ರೂಪದಲ್ಲಿ ಎದುರಾಗಿದೆ, ಮೃತರ ಬಗ್ಗೆ ನಾನು ತೀವ್ರ ಸಂತಾಪ ಸೂಚಿಸುತ್ತೇನೆ. ಅವರ ಕುಟುಂಬಗಳಿಗೂ ಸಾಂತ್ವನ ಹೇಳಲು ಬಯಸುತ್ತೇನೆ. ನಮ್ಮ ವಿದೇಶಾಂಗ ಇಲಾಖೆ ಮತ್ತು ರಾಯಭಾರ ಕಚೇರಿ ಈ ವಿಚಾರದಲ್ಲಿ ಗಮನ ಹರಿಸಿದೆ, ಹಲವು ಕಾರಣಗಳಿಗೆ ಭಾರತೀಯ ವಿದ್ಯಾರ್ಥಿಗಳು ಅಮೆರಿಕದಲ್ಲಿ ಸಾವನ್ನಪ್ಪುತ್ತಿದ್ದಾರೆ, ಹೊಸ ವಿದ್ಯಾರ್ಥಿಗಳು ಅಲ್ಲಿಗೆ ಹೋದಾಗ ರಾಯಭಾರ ಕಚೇರಿ ಅಧಿಕಾರಿಗಳು ನಿಗಾ ಇಡಿ ಅಂತ ಸೂಚಿಸಲಾಗಿದೆ. ಅಮೆರಿಕದಲ್ಲಿ ವಿದ್ಯಾರ್ಥಿಗಳ ಜೀವ ರಕ್ಷಣೆ, ಭದ್ರತೆ ನಮ್ಮ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಿದೆ ಎಂದರು.
ಬೆಂಗಳೂರಲ್ಲಿ ಅಮೆರಿಕ ರಾಯಭಾರ ಕಚೇರಿ ನಿರ್ಮಾಣ ಬೇಡಿಕೆಯ ಪರಿಗಣಿಸಿ ಸಾಕಷ್ಟು ಪ್ರಯತ್ನ ನಡೆದಿದೆ. ಯುಎಸ್ ಕಾನ್ಸುಲೇಟ್ ಕಚೇರಿ ಆರಂಭಿಸುವ ಕೆಲಸ ಪ್ರಗತಿಯಲ್ಲಿದೆ. ಆದಷ್ಟು ಬೇಗ ಆಗಲಿದೆ ಎಂದು ಮಾಹಿತಿ ನೀಡಿದರು.