ದಾವಣಗೆರೆ: ಅಪ್ರಾಪ್ತ ಬಾಲಕ ವಾಹನ ಚಲಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನದ ಮಾಲೀಕರಿಗೆ ಇಪ್ಪತ್ತೈದು ಸಾವಿರ ದಂಡ ವಿಧಿಸಲಾಗಿದೆ. ವಾಹನದ ಮಾಲೀಕರಿಗೆ ಕೋರ್ಟ್ ದಂಡ ವಿಧಿಸಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜ.25 ರಂದು ದಾವಣಗೆರೆ ಟ್ರಾಫಿಕ್ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿರುವ ವೇಳೆ ಈ ಘಟನೆ ನಡೆದಿದೆ. ಅಪ್ರಾಪ್ತ ಬಾಲಕ ನಗರದ ಎಆರ್ಜಿ ಕಾಲೇಜ್ ಬಳಿ ಆಕ್ಟಿವ್ ಹೊಂಡ ಬೈಕ್ ಚಲಾಯಿಸಿಕೊಂಡು ಬಂದಿದ್ದನ್ನು ಪೊಲೀಸರು ತಡೆದು ಪರಿಶೀಲನೆ ನಡೆಸಿದ್ದಾರೆ. ಬೈಕ್ ಅನ್ನು ಜಪ್ತಿ ಮಾಡಿಕೊಂಡು ದಾವಣಗೆರೆ ದಕ್ಷಿಣ ಸಂಚಾರ ಠಾಣೆಯಲ್ಲಿ ಇಂಡಿಯನ್ ಮೋಟಾರ್ ವೆಹಿಕಲ್ ಆಕ್ಟ್ ಅಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದಂಡ ವಿಧಿಸಿದ ಕೋರ್ಟ್: 3ನೇ ASCJ ಮತ್ತು JMFC ದಾವಣಗೆರೆ ನ್ಯಾಯಾಲಯಕ್ಕೆ ಬೈಕ್ ಮಾಲೀಕರ ವಿರುದ್ಧ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಮಾಲೀಕರು ಅಪ್ರಾಪ್ತ ಬಾಲಕನಿಗೆ ವಾಹನ ಚಾಲನೆ ಮಾಡಲು ಕೊಟ್ಟಿದ್ದು ಅಪರಾಧ ಎಂದು 25,000 ರೂ.ಗಳ ದಂಡವನ್ನು ವಿಧಿಸಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ದಾವಣಗೆರೆ: ಶಾಲೆಗೆ ರಜೆ ಹಿನ್ನೆಲೆ ಈಜಲು ತೆರಳಿದ್ದ ಇಬ್ಬರು ಮಕ್ಕಳು ನೀರುಪಾಲು