ಬೆಂಗಳೂರು: ಕುದುರೆಮುಖ ಕಬ್ಬಿಣದ ಅದಿರು ಕಂಪನಿ ವಿಚಾರದಲ್ಲಿ ಕೆಐಓಸಿಎಲ್ ತಪ್ಪು ಮುಚ್ಚಿಕೊಳ್ಳಲು ಕರ್ನಾಟಕ ಸರ್ಕಾರದ ಮೇಲೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮಿಥ್ಯಾರೋಪ ಮಾಡುತ್ತಿದ್ದಾರೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೆರಸುವುದಿಲ್ಲ. ಆದರೆ ಕೆಐಓಸಿಎಲ್ ಈ ಹಿಂದೆ ಗಣಿಗಾರಿಕೆ ನಡೆಸುವಾಗ ಸರಿಪಡಿಸಲು ಸಾಧ್ಯವೇ ಆಗದಷ್ಟು ಪರಿಸರ ಹಾನಿ ಮಾಡಿದೆ. ಪರಿಸರ ಹಾನಿಯ ಮೊತ್ತ ಸೇರಿದಂತೆ 1400 ಕೋಟಿ ರೂ. ಬಾಕಿ ಕಟ್ಟಿಲ್ಲ. ತನ್ನ ತಪ್ಪು ಸರಿಪಡಿಸಿಕೊಳ್ಳಲು ತಯಾರಿಲ್ಲದ ಕಂಪನಿಗೆ ಮತ್ತಷ್ಟು ಪರಿಸರ ಹಾನಿ ಮಾಡಲು ಬಿಡಬೇಕೆ ಎಂದು ಪ್ರಶ್ನಿಸಿದ್ದಾರೆ.
ಸರ್ಕಾರಿ ಸ್ವಾಮ್ಯದ ಕೆಐಓಸಿಎಲ್ ಅಕ್ರಮವಾಗಿ ಲಕ್ಯಾ ಜಲಾಶಯದ ಎತ್ತರ ಹೆಚ್ಚಿಸಿ, ಅರಣ್ಯ ಮುಳುಗಡೆ ಮಾಡಿತ್ತು. ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಎನ್.ಪಿ.ವಿ. ಮೊತ್ತ, ಬಡ್ಡಿ ಸೇರಿ ಸುಮಾರು 1349.52 ಕೋಟಿ ರೂ.ಗಳನ್ನು ಅರಣ್ಯ ಇಲಾಖೆಗೆ ಪಾವತಿಸಬೇಕಿದೆ. ಜೊತೆಗೆ 1334.33 ಹೆಕ್ಟೇರ್ ಭೂಮಿಯನ್ನು ಅರಣ್ಯ ಇಲಾಖೆಗೆ ಹಿಂತಿರುಗಿಸಬೇಕಿದೆ. ಕುಮಾರಸ್ವಾಮಿ ಅವರು, ಅರಣ್ಯ ಇಲಾಖೆಗೆ ಕಟ್ಟಬೇಕಾದ ಬಾಕಿ ಮತ್ತು ಹಿಂತಿರುಗಿಸಬೇಕಾದ ಭೂಮಿಯ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ಖಂಡ್ರೆ ಕೇಳಿದ್ದಾರೆ.
ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ವರದಿಯಲ್ಲಿ ಹಾಗೂ 13ನೇ ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ನೀಡಿರುವ 3ನೇ ವರದಿಯಲ್ಲೂ ಕೆಐಓಸಿಎಲ್ ಪರಿಸರಕ್ಕೆ ಮಾಡಿರುವ ಹಾನಿಯ ಬಗ್ಗೆ ಸ್ಪಷ್ಟವಾಗಿ ಉಲ್ಲೇಖವಿದೆ. ಕಂಪನಿ ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಕ್ಕೆ ಬಳಸಲು ಸೂಕ್ತ ಅನುಮತಿ ಪಡೆಯದೇ ನಿಯಮ ಉಲ್ಲಂಘಿಸಿದೆ. ಮಾಡಿರುವ ತಪ್ಪು ಸರಿಪಡಿಸಿಕೊಂಡು, ದಂಡ ಪಾವತಿಸಿ ಎಂದು ಹೇಳಿದರೆ ಅದು ಅಭಿವೃದ್ಧಿಗೆ ಅಡ್ಡಿ ಮಾಡುವ ರಾಜಕೀಯ ಆಗುತ್ತದೆಯೇ ಎಂದಿದ್ದಾರೆ.
ಕೇಂದ್ರ ಉಕ್ಕು ಸಚಿವಾಲಯದಡಿ ಬರುವ ಎನ್ಎಂಡಿಸಿಗೆ ಉಕ್ಕು ಕಾರ್ಖಾನೆ ಸ್ಥಾಪಿಸಲು 2014ರಲ್ಲಿಯೇ ಬಳ್ಳಾರಿ ಬಳಿ ವೇಣಿವೀರಾಪುರದಲ್ಲಿ 2857.54 ಎಕರೆ ಜಮೀನು ನೀಡಲಾಗಿದೆ. ಉಕ್ಕು ಕಾರ್ಖಾನೆ ಆರಂಭಿಸಿದರೆ 50 ಸಾವಿರ ಜನರಿಗೆ ಉದ್ಯೋಗ ಲಭಿಸುತ್ತದೆ. ಕೆಐಓಸಿಎಲ್ ಮುಚ್ಚಿದರೆ 300 ಕಾರ್ಮಿಕರಿಗೆ ತೊಂದರೆ ಆಗುತ್ತದೆ ಎನ್ನುತ್ತಿದ್ದ ಕುಮಾರಸ್ವಾಮಿ ಈಗ 1000 ಕಾರ್ಮಿಕರು ಎನ್ನುತ್ತಿದ್ದಾರೆ. ವೇಣಿಪುರದಲ್ಲಿ ಕಾರ್ಖಾನೆ ಆರಂಭಿಸಿದರೆ ಉದ್ಯೋಗ ನೀಡಬಹುದು. ಏಕೆ ಆರಂಭ ಮಾಡುತ್ತಿಲ್ಲ ಎಂದು ಸಚಿವರು ಪ್ರಶ್ನೆ ಮಾಡಿದ್ದಾರೆ.
ಹೆಚ್ಎಂಟಿ ರಿಯಲ್ ಎಸ್ಟೇಟ್ ದಂಧೆಗೆ ಅವಕಾಶ ಕೊಡಬೇಕೆ? ಹೆಚ್ಎಂಟಿ ವಶದಲ್ಲಿರುವ ಪೀಣ್ಯ ಪ್ಲಾಂಟೇಷನ್ ಅರಣ್ಯ ಜಮೀನು ಮಂಜೂರಾತಿ ಬಗ್ಗೆಯೇ ಅನುಮಾನವಿದೆ. ಹೆಚ್ಎಂಟಿ ತನಗೆ ಮಂಜೂರಾಗಿದೆ ಎಂದು ಒದಗಿಸಿರುವ ದಾಖಲೆಯಲ್ಲಿ ಸರ್ವೇ ನಂಬರ್ ಮತ್ತು ಮಂಜೂರಾದ ದಿನಾಂಕವೂ ಇಲ್ಲ. 443 ಎಕರೆ ಭೂಮಿ ಮಂಜೂರಾತಿ ಬಗ್ಗೆ ಅಥವಾ ಅರಣ್ಯೇತರ ಉದ್ದೇಶಕ್ಕೆ ಸರ್ಕಾರಿ ಆದೇಶ ಆಗಿರುವ ಯಾವುದೇ ಗೆಜೆಟ್ ಅಧಿಸೂಚನೆ ಇಲ್ಲ. ಹೀಗಿದ್ದೂ ಪ್ರಸ್ತುತ ಮುಚ್ಚಿಹೋಗಿರುವ ಹೆಚ್ಎಂಟಿ ಅರಣ್ಯ ಜಮೀನನ್ನು ಖಾಸಗಿ ಬಿಲ್ಡರ್ಗಳು ಸೇರಿದಂತೆ ಹಲವು ಕಂಪನಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿದೆ. ಹೆಚ್ಎಂಟಿಗೆ ರಿಯಲ್ ಎಸ್ಟೇಟ್ ದಂಧೆ ನಡೆಸಲು ಸರ್ಕಾರ ಅವಕಾಶ ಕೊಡಬೇಕೇ ಎಂದು ಅವರು ಪ್ರಶ್ನಿಸಿದರು.
ಹೆಚ್ಎಂಟಿ. ವಶದಲ್ಲಿರುವ ಅರಣ್ಯ ಭೂಮಿ ಡಿನೋಟಿಫೈ ಆಗಿಲ್ಲ. ಹೀಗಾಗಿ ಅದನ್ನು ಪರಭಾರೆ, ದಾನ ಮಾಡಲು ಅವಕಾಶವೇ ಇಲ್ಲ. ಅರಣ್ಯ ಭೂಮಿ ಮರಳಿ ಪಡೆಯುವುದರಲ್ಲಿ ತಪ್ಪೇನು?. ಇದರಲ್ಲಿ ಅಭಿವೃದ್ಧಿಗೆ ಅಡ್ಡಿ ಪಡಿಸುವ ಯಾವುದೇ ರಾಜಕೀಯ ಇಲ್ಲ. ಬದಲಾಗಿ ರಾಜ್ಯದ ಹಿತವಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಇದನ್ನೂ ಓದಿ: ಹೆಚ್ಎಂಟಿ ವಶದಲ್ಲಿರುವ 14,300 ಕೋಟಿ ಬೆಲೆಯ ಅರಣ್ಯ ಭೂಮಿ ಹಿಂಪಡೆಯಲು ಕ್ರಮ: ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನ
ಇದನ್ನೂ ಓದಿ: ಹೆಚ್ಡಿಕೆ ಮತ್ತು ಸಂಬಂಧಿಕರಿಂದ ಸರ್ಕಾರಿ ಜಮೀನು ಒತ್ತುವರಿ ಆರೋಪ: ಅಧಿಕಾರಿಗಳ ವಿರುದ್ಧ ಹೈಕೋರ್ಟ್ ಗರಂ