ಶಿವಮೊಗ್ಗ: ತನ್ನ ಹೆಂಡತಿಯನ್ನು ಸ್ಕ್ರೂ ಡ್ರೈವರ್ನಿಂದ ಚುಚ್ಚಿ ಕ್ರೂರವಾಗಿ ಕೊಲೆ ಮಾಡಿದ ಪತಿಯೋರ್ವನಿಗೆ ಶಿವಮೊಗ್ಗ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
2020ರಲ್ಲಿ ಶಿವಮೊಗ್ಗದ ಮಲ್ಲಿಕಾರ್ಜುನ ನಗರದಲ್ಲಿ ಮಹಿಳೆಯ ಕೊಲೆ ನಡೆದಿತ್ತು. ಸಯ್ಯದ್ ಪರ್ವೀಜ್ ತನ್ನ 24 ವರ್ಷದ ಹೆಂಡತಿಯ ಜೊತೆ ಜಗಳ ಮಾಡಿ, ಮನೆಯಲ್ಲಿದ್ದ ಸ್ಕ್ರೂ ಡ್ರೈವರ್ನಿಂದ ಆಕೆಯ ಹೊಟ್ಟೆ ಹಾಗೂ ಬೆನ್ನಿನ ಭಾಗಕ್ಕೆ ಹಲವು ಕಡೆ ಚುಚ್ಚಿ ಕೊಲೆ ಮಾಡಿದ್ದಾನೆಂದು ಮೃತಳ ತಂದೆ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ತುಂಗಾನಗರ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ನಡೆಸಿದ ಅಂದಿನ ಸಿಪಿಐ, ಹಾಲಿ ಡಿವೈಎಸ್ಪಿ ಆಗಿರುವ ಸಂಜೀವ್ ಕುಮಾರ್ ಅವರು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷರೋಪ ಪಟ್ಟಿ ಸಲ್ಲಿಸಿದ್ದರು.
ಇದನ್ನೂ ಓದಿ: ವಾಹನ ಚಲಾಯಿಸಿದ ಅಪ್ರಾಪ್ತ ಬಾಲಕ: ಮಾಲೀಕರಿಗೆ 25 ಸಾವಿರ ದಂಡ ವಿಧಿಸಿದ ಕೋರ್ಟ್
ಪ್ರಕರಣದ ತನಿಖಾ ವರದಿ ಪರಿಶೀಲಿಸಿ, ವಾದ ಹಾಗೂ ಪ್ರತಿವಾದ ಅಲಿಸಿದ ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮರುಳ ಸಿದ್ದಾರಾಧ್ಯ ಹೆಚ್.ಜೆ. ಅವರು ಸಯ್ಯದ್ ಪರ್ವಿಜ್ ಅಪರಾಧಿ ಎಂದು ಪರಿಗಣಿಸಿದ್ದಾರೆ. ಅಲ್ಲದೆ, ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಪ್ರಕರಣದಲ್ಲಿ ಸರ್ಕಾರಿ ವಕೀಲರಾದ ಮಮತಾ ವಾದ ಮಂಡಿಸಿದ್ದರು.
ಇದನ್ನೂ ಓದಿ: ಕೊಲೆ ಯತ್ನ ಪ್ರಕರಣಕ್ಕೆ ಪ್ರತಿಯಾಗಿ ಎಸ್ಸಿ - ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದೂರು: ಎಫ್ಐಆರ್ ರದ್ದು