ಬೆಂಗಳೂರು :ಹೋಟೆಲ್ ಹಾಗೂ ರೆಸ್ಟೋರೆಂಟ್ ಉದ್ಯಮದ ಮೇಲೆ ನೀರಿನ ಅಭಾವದ ಬಿಸಿ ತಟ್ಟಿದ್ದು, ಮಾಲೀಕರಿಗೆ ನೀರು ಖರೀದಿಸುವುದೇ ದೊಡ್ಡ ತಲೆನೋವಾಗಿದೆ. ಇನ್ನೊಂದೆಡೆ ಆಸ್ಪತ್ರೆಗಳಲ್ಲೂ ಕೂಡ ನೀರಿನ ಅಭಾವ ಕಾಣುತ್ತಿದೆ. ನೀರಿನ ಟ್ಯಾಂಕರ್ ಬುಕ್ ಮಾಡಿದರೆ ಎರಡು ಮೂರು ದಿನಗಳವರೆಗೆ ಕಾಯುವ ಪರಿಸ್ಥಿತಿ ಎದುರಾಗಿದೆ. ನಗರದ ಹಲವು ಭಾಗಗಳಲ್ಲಿ ನೀರಿನ ಸಮಸ್ಯೆೆಯುಂಟಾಗಿದ್ದು, ನಿತ್ಯದ ವ್ಯಾಪಾರದ ಜತೆಗೆ ನೀರಿನ ಅವಶ್ಯಕತೆಯ ಕಡೆಗೂ ಗಮನಹರಿಸುವುದು ಹೋಟೆಲ್ ಮಾಲೀಕರಿಗೆ ಸಮಸ್ಯೆೆಯಾಗಿದೆ.
ಈಗಿರುವ ಬೋರ್‌ವೆಲ್‌ಗಳು ಸಂಪೂರ್ಣ ಬರಿದಾಗಿದ್ದು, ರಿಪೇರಿ ಮಾಡಿದರೂ ನಿರೀಕ್ಷಿತ ಮಟ್ಟದಲ್ಲಿ ನೀರು ಸಿಗುವುದೇ ಅನುಮಾನವಾಗಿದೆ. ಹೀಗಾಗಿ ಹೊಸ ಬೋರ್ವೆಲ್ಗಳನ್ನು ತೆಗೆಯಲು ಹೋಟೆಲ್ ಹಾಗೂ ರೆಸ್ಟೋರೆಂಟ್ ಮಾಲೀಕರು ಜಲ ಮಂಡಳಿಗೆ ಅರ್ಜಿ ಸಲ್ಲಿಸಿದ್ದಾರೆ. ಹೋಟೆಲ್‌ಗಳಲ್ಲಿ ನೀರನ್ನು ಹಿತ - ಮಿತವಾಗಿ ಬಳಸಲು, ಬಳಸಿ ಬಿಸಾಡುವಂತಹ ಪ್ಲೇಟ್ ಹಾಗೂ ಕಪ್‌ಗಳನ್ನು ಬಳಸುತ್ತಿದ್ದಾರೆ. ಕೊರೊನಾ ಸಮಯದಲ್ಲಿ ಈ ರೀತಿಯ ಪ್ಲೇಟ್‌ಗಳನ್ನು ಬಳಸಲಾಗುತ್ತಿತ್ತು. ಇದೀಗ ನೀರಿನ ಕೊರತೆ ಹಿನ್ನೆೆಲೆ ಮತ್ತೆೆ ಬಳಸಿ ಬಿಸಾಡುವಂತಹ ವಸ್ತುಗಳನ್ನು ಹೋಟೆಲ್‌ಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಕುಡಿಯುವ ನೀರನ್ನು ಉಳಿಸಲು ಪ್ಯಾಕೇಜ್ ವಾಟರ್ ಬಾಟೆಲ್‌ಗಳನ್ನು ಹೆಚ್ಚಾಗಿ ನೀಡಲಾಗುತ್ತಿದೆ. ಗ್ರಾಹಕರು ಬಂದ ತಕ್ಷಣ ಗಾಜಿನ ಅಥವಾ ಸ್ಟೀಲ್ ಲೋಟದಲ್ಲಿ ನೀರು ಕೊಡುವುದನ್ನು ನಿಲ್ಲಿಸಲಾಗಿದೆ.
ಹೋಟೆಲ್‌ಗಳಲ್ಲಿ ಪಾತ್ರೆೆ ತೊಳೆಯಲು ಬಳಸಿದ ನೀರನ್ನು ಎಸೆಯದೇ ಗಿಡಗಳಿಗೆ ಹಾಕಲಾಗುತ್ತಿದೆ. ಹೀಗೆ ತಮ್ಮ ದಿನ ನಿತ್ಯದ ವ್ಯವಹಾರದಲ್ಲಿ ಸಣ್ಣ ಬದಲಾವಣೆ ಮಾಡಿಕೊಂಡು ನೀರು ಉಳಿಸಲು ನಗರದ ಹೋಟೆಲ್ ಮಾಲೀಕರು ಮುಂದಾಗಿದ್ದಾರೆ.
ಈ ಕುರಿತು ಈಟಿವಿ ಭಾರತದ ಜೊತೆ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪಿ. ಸಿ ರಾವ್ ಮಾತನಾಡಿ, ''ಶೇಕಡಾ 20ರಷ್ಟು ನೀರನ್ನು ಉಳಿಸಲು ಸಾಕಷ್ಟು ಯೋಜನೆಗಳನ್ನು ನಗರದ ಹೋಟೆಲ್ಗಳು ಹಮ್ಮಿಕೊಂಡಿವೆ. ನೀರು ಪೋಲಾಗುವುದನ್ನು ನಿಲ್ಲಿಸಲು ಸಹ ಹೇಳಿದ್ದೇವೆ. ನೀರಿನ ಸರಬರಾಜು ಕೊರತೆ ಎದ್ದು ಕಾಣುತ್ತಿದೆ. ಸರ್ಕಾರ ನೀರನ್ನು ಕೊಡಲು ಪ್ರಾರಂಭಿಸಿದ್ದು, ಅದರ ಸಾಧಕ - ಬಾಧಕಗಳನ್ನು ವಿಶ್ಲೇಷಿಸಿ ಮುಂದಿನ ಯೋಜನೆಯನ್ನು ರೂಪಿಸಲಿದ್ದೇವೆ'' ಎಂದಿದ್ದಾರೆ.