ದಾವಣಗೆರೆ :ಬೆಣ್ಣೆ ನಗರಿ ದಾವಣಗೆರೆಗೆ ಜಲಕಂಠಕ ಎದುರಾಗಿದೆ. ಜಿಲ್ಲೆಯ ಜೀವನಾಡಿ ತುಂಗಭದ್ರಾ ನದಿಯಲ್ಲಿ ಹನಿ ನೀರಿಲ್ಲದೇ ಭಣಗುಡುತ್ತಿದೆ. ಇತ್ತ ದಾವಣಗೆರೆ ನಗರಕ್ಕೆ ಕುಡಿಯುವ ನೀರನ್ನು ಪೂರೈಸುವ ರಾಜನಹಳ್ಳಿ ಜಾಕ್ವೆಲ್ ಸ್ಥಗಿತಗೊಳಿಸಲಾಗಿದೆ. ತುಂಗಭದ್ರಾ ನದಿಯಲ್ಲಿ ನೀರಿಲ್ಲದ ಕಾರಣ ರಾಜನಹಳ್ಳಿ ಜಾಕ್ವೆಲ್ ಬಂದ್ ಮಾಡಲಾಗಿದ್ದು, ದಾವಣಗೆರೆ ನಗರಕ್ಕೆ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ಇನ್ನು ಕುಂದವಾಡ ಕೆರೆ ಹಾಗೂ ಟಿವಿ ಸ್ಟೇಷನ್ ಈ ಎರಡು ಕೆರೆಗಳಲ್ಲಿ ಕೇವಲ 20 ದಿನಗಳಿಗಾಗುವಷ್ಟು ನೀರಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಾವಣಗೆರೆ ಜಿಲ್ಲೆ ತುಂಗಭದ್ರಾ ನದಿಯ ದಡದಲ್ಲಿರುವ ಜಿಲ್ಲೆ. ಇಲ್ಲಿ ನೀರಿಗೇನು ಬರ ಇರಲಿಲ್ಲ. ದುರಂತ ಎಂದರೆ ಇಡೀ ತುಂಗಭದ್ರಾ ನದಿ ನೀರಿಲ್ಲದೆ ಭಣಗುಡುತ್ತಿದ್ದರಿಂದ ದಾವಣಗೆರೆಗೆ ಜಲ ಕಂಠಕ ಎದುರಾಗಿದೆ. ಕುಡಿಯುವ ನೀರು ಇಲ್ಲದ ಕಾರಣ ಸಾರ್ವಜನಿಕರು ನೀರನ್ನು ಮಿತವಾಗಿ ಬಳಕೆ ಮಾಡ್ಬೇಕೆಂದು ದಾವಣಗೆರೆ ಮಹಾನಗರ ಪಾಲಿಕೆ ಅಧಿಕಾರಿಗಳು ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದಾರೆ.
ಇನ್ನು ಟಿವಿ ಸ್ಟೇಷನ್ ಹಾಗೂ ಕುಂದವಾಡ ಕೆರೆಗಳಲ್ಲಿ 20 ದಿನಕ್ಕೆ ಆಗುವಷ್ಟು ಮಾತ್ರ ನೀರಿದ್ದು, ಎರಡು ತಿಂಗಳು ಕಾಲ ದಾವಣಗೆರೆ ಜನತೆ ಸಹಕರಿಸಬೇಕಾಗಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಜಾಕ್ವೆಲ್ನಿಂದ ಕುಂದವಾಡ ಕೆರೆಗೆ 60 ಎಂಎಲ್ಡಿ ನೀರು ಬರಬೇಕಿತ್ತು. ಅದು ಕೂಡ ಬಂದ್ ಆಗಿದೆ. ಕುಂದವಾಡ ಕೆರೆಯಲ್ಲಿ ಲಭ್ಯವಿರುವ ನೀರಿನಲ್ಲೇ ಹಳೇ ದಾವಣಗೆರೆ ಭಾಗಕ್ಕೆ ಕುಡಿಯಲು ನೀರು ಕೊಡಲಾಗುತ್ತಿದೆ.
ಇನ್ನು ಟಿವಿ ಸ್ಟೇಷನ್ ಕೆರೆಗೆ ಭದ್ರಾ ಜಲಾಶಯದಿಂದ ಕಾಲುವೆಗೆ ನೀರು ಹರಿಸಲಾಗಿದೆ. ಟಿವಿ ಸ್ಟೇಷನ್ ಕೆರೆಗೆ ಭದ್ರಾ ಜಲಾಶಯದಿಂದ ಕಾಲುವೆ ಮೂಲಕ 35 ಎಂಎಲ್ಡಿ ನೀರು ಬರಬೇಕಿತ್ತು. ಅಕ್ರಮ ಪಂಪ್ ಸೆಟ್ ಹಾವಳಿಯಿಂದ ಕಡಿಮೆ ಪ್ರಮಾಣದಲ್ಲಿ ಅಂದ್ರೆ ಕೇವಲ 10 ಎಂಎಲ್ಡಿಯಷ್ಟು ನೀರು ಕೆರೆಗೆ ಹರಿದು ಬರುತ್ತಿರುವುದು ಅಧಿಕಾರಿಗಳಿಗೆ ಚಿಂತೆಗೀಡು ಮಾಡಿದೆ. ಇದರಿಂದ ಟ್ಯಾಂಕರ್ ನೀರು ಕೊಡಲು ಅಧಿಕಾರಿಗಳು ಸನ್ನದ್ದವಾಗಿದ್ದಾರೆ.
ಇಪ್ಪತ್ತು ದಿನಗಳಿಗೆ ಆಗುವಷ್ಟಿದೆ ನೀರು : ಕುಡಿಯುವ ನೀರು ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಉದಯ್ ಕುಮಾರ್ ಅವರು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ "ನಗರದ ಟಿವಿ ಸ್ಟೇಷನ್ ಕೆರೆ ಮತ್ತು ಕುಂದವಾಡ ಕೆರೆಯಲ್ಲಿ 20 ದಿನಕ್ಕೆ ಆಗುವಷ್ಟು ನೀರಿದೆ. ಎರಡು ತಿಂಗಳು ದಾವಣಗೆರೆ ಜನತೆ ಸಹಕರಿಸಬೇಕಾಗಿದೆ. ಕುಂದವಾಡ ಕೆರೆಗೆ 60 ಎಂಎಲ್ಡಿ ನೀರು ಹರಿದು ಬರಬೇಕಿತ್ತು. ಆದರೆ ನದಿಯಲ್ಲಿ ನೀರಿಲ್ಲದ ಕಾರಣ ನೀರಿಗೆ ಬರ ಎದುರಾಗಿದೆ. ಅದರಲ್ಲೇ ಕುಂದವಾಡ ಕೆರೆಯಲ್ಲಿ ಲಭ್ಯವಿರುವ ನೀರನ್ನು ಹಳೇ ದಾವಣಗೆರೆ ಭಾಗಕ್ಕೆ ಕೊಡಲಾಗುತ್ತಿದೆ. ಇನ್ನು ಟಿವಿ ಸ್ಟೇಷನ್ನ ಕೆರೆ ಭದ್ರಾ ಕಾಲುವೆಗೆ ನೀರು ಹರಿಸಲಾಗಿದೆ.