ಬೆಳಗಾವಿ: ಪ್ರಭಾವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿನಿಧಿಸುವ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಮಹಿಳೆಯರು, ಮಕ್ಕಳು, ವೃದ್ಧರು ನೀರಿಗಾಗಿ ನಿತ್ಯ ಖಾಸಗಿ ಜಮೀನಿನಲ್ಲಿರುವ ಬೋರ್ವೆಲ್ ಗಳಿಂದ ನೀರು ಹೊತ್ತು ತರುತ್ತಿದ್ದಾರೆ. ಅಲ್ಲದೇ ಈ ಗ್ರಾಮದ ರೈತರೊಬ್ಬರು ಊರಿನವರಿಗೆ ಉಚಿತವಾಗಿ ನೀರು ಕೊಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
ಬೆಳಗಾವಿ ತಾಲೂಕಿನ ಅದರಲ್ಲೂ ಪ್ರಭಾವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿನಿಧಿಸುವ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಬಡಾಲ ಅಂಕಲಗಿ ಗ್ರಾಮದಲ್ಲಿ ನೀರಿಗೆ ಹಾಹಾಕಾರ ಇದೆ. ಈ ನಡುವೆ ಇಡೀ ಊರಿಗೆ ಭಗೀರಂಥನಾಗಿರುವ ಬಸವಂತಪ್ಪ ನಾಯಿಕ್ ಎಂಬುವರು ಸದ್ಯ ಮಾನವೀಯ ದೃಷ್ಟಿಯಿಂದ ನೀರು ಕೊಡ್ತಿದ್ದಾರೆ.
ಬತ್ತಿದ ಜಲಮೂಲಗಳು:ಊರಲ್ಲಿರುವ ಕೆರೆ, ಬಾವಿ ಹಾಗೂ ಹಳ್ಳ ಕೊಳ್ಳಗಳು ಬತ್ತಿ ಹೋಗಿದ್ದರಿಂದ ಕುಡಿಯುವ ನೀರಿಗೆ ಮೂಲವಾಗಿದ್ದ ಬೋರ್ವೆಲ್ಗಳಲ್ಲೂ ನೀರು ಸಿಗುತ್ತಿಲ್ಲ. ಹೀಗಾಗಿ ಜನ ಕುಡಿಯುವ ನೀರಿಗಾಗಿ ಪರದಾಡ್ತಿದ್ದು ಊರ ಹೊರಗಿರುವ ಖಾಸಗಿ ಬೋರ್ವೆಲ್ಗೆ ಬಂದು ಜನ ನೀರು ತುಂಬಿಕೊಂಡು ಹೋಗ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಹುಗ್ರಾಮ ಕುಡಿಯುವ ನೀರು ಹಾಗೂ ಜಲಜೀವನ್ ಮಿಷನ್ ನಂಥ ಯೋಜನೆಗಳನ್ನು ಜಾರಿ ಮಾಡಿ ಅದಕ್ಕಾಗಿ ಕೋಟಿ ಕೋಟಿ ಅನುದಾನ ಖರ್ಚು ಮಾಡಿದ್ರೂ ಸಹ ಇಲ್ಲಿ ಜನರಿಗೆ ಸರಿಯಾಗಿ ಕುಡಿಯುವ ನೀರು ಸಿಗ್ತಿಲ್ಲ. ಬಡಾಲ ಅಂಕಲಗಿ ಗ್ರಾಮದಿಂದ ಕೇವಲ 6 ಕಿ.ಮೀ. ಅಂತರದಲ್ಲಿ ಮಲಪ್ರಭಾ ನದಿ ಹರಿದಿದ್ದರೂ ಸಹ ಯಾವುದೇ ಪ್ರಯೋಜನ ಆಗಿಲ್ಲ. ನದಿಯಿಂದ ನೀರೆತ್ತಿ ಗ್ರಾಮಕ್ಕೆ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕಾಗಿದೆ.
ಸುಮಾರು 10 ಸಾವಿರ ಜನಸಂಖ್ಯೆ ಹೊಂದಿರುವ ಬಡಾಲ ಅಂಕಲಗಿ ಗ್ರಾಮಕ್ಕೆ ಸಧ್ಯ ಒಂದೇ ಒಂದು ಖಾಸಗಿ ಬೋರ್ವೆಲ್ ಮೇಲೆ ಅವಲಂಬನೆ ಆಗಿದೆ. ಈವರೆಗೆ ಗ್ರಾಮಕ್ಕೆ ಜಿಲ್ಲಾಡಳಿತ ನೀರಿನ ಟ್ಯಾಂಕರ್ ಸಹ ಒದಗಿಸಿಲ್ಲ. ಹೀಗಾಗಿ ಜನ ಕುಡಿಯುವ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ.
10 ವರ್ಷಗಳಿಂದ ಉಚಿತವಾಗಿ ನೀರು ಪೂರೈಕೆ:10 ವರ್ಷಗಳಿಂದ ನಿರಂತರವಾಗಿ ಗ್ರಾಮದ ಜನರಿಗೆ ನೀರು ಕೊಡುತ್ತಿದ್ದೇವೆ. ಬೆಳಗಿನ 6 ಗಂಟೆಗೆ ಶುರುವಾದರೆ ರಾತ್ರಿ 10 ಗಂಟೆವರೆಗೂ ಜನ ನೀರು ಒಯ್ಯುತ್ತಾರೆ. ನಾವು ನೀರು ಕೊಡದಿದ್ದರೆ ಜನರಿಗೆ ನೀರೇ ಇಲ್ಲ. ಈಗಾಗಲೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ 900 ಕೋಟಿ ಅನುದಾನವನ್ನು ಗ್ರಾಮೀಣ ಕ್ಷೇತ್ರದಲ್ಲಿ ಕೆರೆ ತುಂಬಿಸಲು ಬಿಡುಗಡೆ ಮಾಡಿಸಿಕೊಂಡು ಬಂದಿದ್ದಾರೆ. ಅದು ಪೂರ್ತಿಯಾದರೆ, ಜಲಮೂಲಗಳಿಗೆ ಜೀವ ಬರಲಿದೆ. ನಮ್ಮೂರ ಜನ ದೂರದಿಂದ ನೀರು ಹೊರುವುದನ್ನು ತಪ್ಪಿಸುವತ್ತ ಸರ್ಕಾರ ಗಮನಹರಿಸಬೇಕು ಎಂದು ಖಾಸಗಿ ಬೋರ್ವೆಲ್ ಮಾಲೀಕ ಬಸವಂತಪ್ಪ ನಾಯಿಕ್ ತಿಳಿಸಿದ್ದಾರೆ.