ಉತ್ತರ ಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ (Etv Bharat) ಕಾರವಾರ(ಉತ್ತರ ಕನ್ನಡ):ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಮುಕ್ತ, ಪಾರದರ್ಶಕ ಮತ್ತು ಶಾಂತಿಯುತ ಮತದಾನಕ್ಕೆ ಜಿಲ್ಲೆಯಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮೇ 7 ರಂದು ಮತದಾನ ನಡೆಯಲಿದೆ. ಜಿಲ್ಲೆಯ ಮತದಾರರು ತಪ್ಪದೇ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಮನವಿ ಮಾಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
"ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 1,977 ಮತಗಟ್ಟೆಗಳಿವೆ. ಸುಗಮ ಚುನಾವಣಾ ಕರ್ತವ್ಯಕ್ಕಾಗಿ 6,939 ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇವರಿಗೆ ಈಗಾಗಲೇ 2 ಹಂತದ ತರಬೇತಿ ನೀಡಿ, ಕರ್ತವ್ಯಕ್ಕೆ ಸಂಪೂರ್ಣವಾಗಿ ಸಜ್ಜುಗೊಳಿಸಲಾಗಿದೆ" ಎಂದರು.
"ಕ್ಷೇತ್ರ ವ್ಯಾಪ್ತಿಯಲ್ಲಿ 8,23,604 ಪುರುಷ, 8,17,536 ಮಹಿಳಾ ಮತ್ತು 16 ಮಂದಿ ಇತರೆ ಮತದಾರರು ಸೇರಿ ಒಟ್ಟು 16,41,156 ಮತದಾರರಿದ್ದಾರೆ. ಪ್ರತೀ ಮನೆಗಳಿಗೆ ವೋಟರ್ ಸ್ಲಿಪ್ಗಳನ್ನು ವಿತರಿಸಲಾಗಿದೆ" ಎಂದು ತಿಳಿಸಿದರು.
"ಮತದಾರರು ತಮ್ಮ ಎಪಿಕ್ ಕಾರ್ಡ್ ಅಥವಾ ಚುನಾವಣಾ ಆಯೋಗ ಸೂಚಿಸಿರುವ ಪರ್ಯಾಯ ಗುರುತಿನ ದಾಖಲೆಗಳನ್ನು ತೋರಿಸಿ ಮತದಾನ ಮಾಡಬಹುದು" ಎಂದು ಮಾಹಿತಿ ನೀಡಿದರು.
"ಒಟ್ಟು 1,015 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. 303 ಮೈಕ್ರೋ ಅಬ್ಸರ್ವರ್, 21 ಮಂದಿ ವಿಡಿಯೋಗ್ರಾಫರ್ಗಳು ಹಾಗೂ 200 ಸೆಕ್ಟರ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಎಲ್ಲಾ ಮತಗಟ್ಟೆಗಳಲ್ಲಿ ಮತದಾರರಿಗೆ ಕುಡಿಯುವ ನೀರು ಮತ್ತು ನೆರಳಿನ ವ್ಯವಸ್ಥೆ ಮಾಡಲಾಗಿದೆ. ಹಿರಿಯ ನಾಗರಿಕರಿಗೆ ಮತ್ತು ವಿಶೇಷಚೇತನರಿಗೆ ವೀಲ್‌ಚೇರ್ ವ್ಯವಸ್ಥೆ ಮತ್ತು ರ‍್ಯಾಂಪ್ ವ್ಯವಸ್ಥೆ ಮಾಡಲಾಗಿದೆ" ಎಂದರು.
ಚುನಾವಣಾ ಸಿಬ್ಬಂದಿಗೆ ಆರೋಗ್ಯ ಕಿಟ್: "ಚುನಾವಣಾ ಸಿಬ್ಬಂದಿಗೆ ದೈನಂದಿನ ಉಪಯೋಗಕ್ಕೆ ಅಗತ್ಯವಿರುವ ಕಿಟ್ ಜೊತೆಗೆ ಅವರ ಆರೋಗ್ಯ ಕಾಪಾಡಿಕೊಳ್ಳುವ ಉದ್ದೇಶದಿಂದ ತುರ್ತು ಬಳಕೆಗೆ ಅಗತ್ಯವಿರುವ ಔಷಧದ ಕಿಟ್ ಅನ್ನು ಕೂಡಾ ನೀಡಲಾಗುತ್ತಿದೆ. ಮಹಿಳಾ ಮತಗಟ್ಟೆ, ವಿಶೇಷಚೇತನ ಮತಗಟ್ಟೆ ಮತ್ತು ಯುವ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ವಿಶೇಷ ಸಮವಸ್ತ್ರಗಳನ್ನು ವಿತರಿಸಲಾಗುತ್ತಿದೆ" ಎಂದು ತಿಳಿಸಿದರು.
"ವಿವಿಧ ರೀತಿಯ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ಧ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಸುವಿಧಾ ಮೂಲಕ 283 ಅನುಮತಿಗಳನ್ನು ನೀಡಲಾಗಿದೆ. ಉಚಿತ ಸಹಾಯವಾಣಿ ಸಂ.1950 ಗೆ ಇದುವರೆಗೆ ಸಲ್ಲಿಕೆಯಾಗಿರುವ 439 ಕರೆಗಳು ಮತ್ತು ಎನ್.ಜಿ.ಎಸ್.ಪಿ ಮೂಲಕ ಸಲ್ಲಿಕೆಯಾಗಿದ್ದ 265 ದೂರುಗಳು ಹಾಗೂ ಸಿವಿಜಿಲ್ ಮೂಲಕ ಸಲ್ಲಿಕೆಯಾಗಿದ್ದ 1176 ದೂರುಗಳನ್ನು ಕಾಲಮಿತಿಯೊಳಗೆ ಇತ್ಯರ್ಥಗೊಳಿಸಲಾಗಿದೆ. ನೀತಿ ಸಂಹಿತೆ ಆರಂಭವಾದಾಗಿನಿಂದ ಇದುವರೆಗೆ 1,13,876.,655 ಲೀ ಮದ್ಯವನ್ನು ವಶಪಡಿಸಿಕೊಂಡಿದ್ದು, ಇದರ ಮೌಲ್ಯ ರೂ.2,52,41,188 ಮತ್ತು 3.827 ಕೆಜಿ ಮಾದಕವಸ್ತು ವಶಪಡಿಸಿಕೊಂಡಿದ್ದು ಇದರ ಮೌಲ್ಯ ರೂ. 68,500. ಅಲ್ಲದೇ 84,87,847 ರೂ ಮೌಲ್ಯದ ಚಿನ್ನ ಮತ್ತು ಬೆಳ್ಳಿ, ಹಾಗೂ ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 36,93,300 ರೂ. ವಶಪಡಿಸಿಕೊಳ್ಳಲಾಗಿದೆ" ಎಂದು ಹೇಳಿದರು.
"ವಿವಿಧ ಕಾರಣಗಳಿಂದ ಮತದಾನ ಕುರಿತು ಬಹಿಷ್ಕಾರ ಹಾಕಿದ್ದ ಸಾರ್ವಜನಿಕರನ್ನು ಮತದಾನ ಮಾಡುವಂತೆ ಮನವೊಲಿಸಲಾಗಿದೆ. ಮನೆಯಿಂದಲೇ ಮತದಾನ ಮಾಡುವ ಕಾರ್ಯಕ್ರಮದಲ್ಲಿ ಶೇ.95 ರಷ್ಟು ಸಾಧನೆ ಆಗಿದ್ದು, ಅರ್ಹ 5,023 ಮತದಾರಲ್ಲಿ 4,819 ಮಂದಿ ಮತದಾನ ಮಾಡಿದ್ದು, 64 ಮಂದಿ ಮೃತಪಟ್ಟಿದ್ದು, 140 ಮಂದಿ ಮನೆಯಲ್ಲಿ ಇಲ್ಲದೇ ಮತದಾನಕ್ಕೆ ಗೈರು ಆಗಿದ್ದಾರೆ"ಎಂದರು.
"ಜಿಲ್ಲೆಯಲ್ಲಿನ 85 ವರ್ಷ ಮೇಲ್ಪಟ್ಟವರು ಮತ್ತು ವಿಕಲಚೇನರಿಗೆ ಮತಗಟ್ಟೆಗಳಿಗೆ ಬರಲು ಅನುಕೂಲವಾಗುವಂತೆ ಉಚಿತ ವಾಹನ ವ್ಯವಸ್ಥೆ ಮಾಡಿದ್ದು, ಈ ಸೌಲಭ್ಯಕ್ಕಾಗಿ ಈಗಾಗಲೇ 686 ವಿಕಲಚೇತನರು ಮತ್ತು 238 ಹಿರಿಯ ನಾಗರಿಕರು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಮೇ 5ರ ಸಂಜೆ 5 ಗಂಟೆಯಿಂದ ಮೇ 7ರ ಮಧ್ಯರಾತ್ರಿ 12 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಿ ಈಗಾಗಲೇ ಆದೇಶಿಸಲಾಗಿದೆ" ಎಂದರು.
"ಮೇ 5ರಂದು ಸಂಜೆ 6 ಗಂಟೆಯಿಂದ ಮೇ 7ರ ಮತದಾನ ಮುಕ್ತಾಯವಾಗುವವರೆಗೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರದ ಮತದಾನ ನಡೆಯುವ ಮತಗಟ್ಟೆಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯ ಸುತ್ತ ಸಿ.ಆರ್.ಪಿ.ಸಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಸ್ವೀಪ್ ಕಾರ್ಯಕ್ರಮಗಳ ಮೂಲಕ ಜಿಲ್ಲೆಯಲ್ಲಿ ಮತದಾನದ ಕುರಿತಂತೆ ವ್ಯಾಪಕವಾಗಿ ಜಾಗೃತಿ ಮೂಡಿಸಿದ್ದು, ಜಿಲ್ಲೆಯಿಂದ ಹೊರಗಿರುವ ಮತದಾರಿಗೆ ಮೇ 7 ರಂದು ಮತದಾನ ಮಾಡಲು ಜಿಲ್ಲೆಗೆ ಆಗಮಿಸುವಂತೆ ಕೋರಿ ಪತ್ರ ಬರೆಯಲಾಗುತ್ತಿದೆ" ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಇದನ್ನೂ ಓದಿ:ದೇಶದ ಭವಿಷ್ಯಕ್ಕಾಗಿ ವೋಟ್ ಮಾಡಿ ಸೂಕ್ತ ಅಭ್ಯರ್ಥಿ ಗೆಲ್ಲಿಸಿ: ಹಾಸ್ಟೆಲ್ ವಿದ್ಯಾರ್ಥಿಗಳಿಂದ ಪೋಷಕರಿಗೆ ಪತ್ರ - Students Voting Awareness